ADVERTISEMENT

‘ನುಗು’ ಸನಿಹ ಅದಿರು ಶೋಧ: ಅರಣ್ಯ ಇಲಾಖೆಗೆ ಭೂ ಸರ್ವೇಕ್ಷಣಾ ಸಂಸ್ಥೆ ಪ್ರಸ್ತಾವನೆ

ಮೋಹನ್ ಕುಮಾರ ಸಿ.
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
ಶಾಂತಿಪುರ ವ್ಯಾಪ್ತಿಯ ಅರಣ್ಯ 
ಶಾಂತಿಪುರ ವ್ಯಾಪ್ತಿಯ ಅರಣ್ಯ    

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಸನಿಹದಲ್ಲಿರುವ ಅರಣ್ಯ ಪ್ರದೇಶ ಸೇರಿ 13 ಗ್ರಾಮಗಳಲ್ಲಿ ಸಿಲಿಮನೈಟ್ ಮತ್ತು ಕಯನೈಟ್ ಅದಿರಿನ ಪೂರ್ವಾನ್ವೇಷಣೆ ಚಟುವಟಿಕೆ ನಡೆಸಲು ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಅರಣ್ಯ ಇಲಾಖೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿದೆ.

ಒಂದು ವೇಳೆ ಅನುಮತಿ ದೊರೆತಲ್ಲಿ ಸರಗೂರು ತಾಲ್ಲೂಕಿನ ಹೊನಗನಹಳ್ಳಿ ಮತ್ತು ಶಾಂತಿಪುರ ವಲಯದ 499 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 1,001 ಅರಣ್ಯೇತರ ಭೂಮಿಯಲ್ಲಿ ಉದ್ದೇಶಿತ ಅದಿರು ‍ಅನ್ವೇಷಣೆ ನಡೆಯಲಿದೆ. ಹಿರಿಯ ಭೂವಿಜ್ಞಾನಿ ನೇತೃತ್ವದ ಮೂವರು ಸಿಬ್ಬಂದಿಯನ್ನು ಅ.16ರಂದು ‘ಜಿಎಸ್‌ಐ’ ನಿಯೋಜಿಸಿದೆ. ‘50 ದಿನಗಳಲ್ಲಿ ಶೋಧ ನಡೆಸಿ, ವರದಿ ತಯಾರಿಸಲಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಿದೆ. 

ಎಚ್‌.ಡಿ.ಕೋಟೆ, ಸರಗೂರು ತಾಲ್ಲೂಕುಗಳ ಗಡಿಯಾಗಿ ಹರಿಯುವ ಕಬಿನಿ ನದಿ ತೀರದಲ್ಲಿರುವ ಶಾಂತಿ‍ಪುರ ಗ್ರಾಮದ ಎರಡು ಬೃಹತ್ ಬೆಟ್ಟಗಳ ಅರಣ್ಯ ಭೂಮಿ ಹಾಗೂ ಸುತ್ತಲ ಗ್ರಾಮಗಳಲ್ಲಿ ಅನ್ವೇಷಣೆ ನಡೆಯಲಿದೆ. ಇಲ್ಲಿಂದ ನುಗು ಜಲಾಶಯ 4.5 ಕಿ.ಮೀ ಹಾಗೂ ಕಬಿನಿ ಜಲಾಶಯದ ಅಣೆಕಟ್ಟೆ 6.8 ಕಿ.ಮೀ ದೂರದಲ್ಲಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನುಗು ವನ್ಯಜೀವಿಧಾಮ ಕೂಡ ಸನಿಹದಲ್ಲಿವೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕದೇವಮ್ಮ ಬೆಟ್ಟವೂ 1.5 ಕಿ.ಮೀ ದೂರದಲ್ಲಿದೆ. 

ADVERTISEMENT

‘ಮಾನವ– ವನ್ಯಜೀವಿ ಸಂಘರ್ಷದಲ್ಲಿ ನಲುಗಿರುವ ಪರಿಸರ ಸೂಕ್ಷ್ಮ ವಲಯದ ಈ ಭಾಗದಲ್ಲಿ ಗಣಿಗಾರಿಕೆ ಆರಂಭವಾದರೆ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಲಿದೆ’ ಎಂಬ ಆತಂಕವೂ ಇದೇ ವೇಳೆ ಪರಿಸರ ಹೋರಾಟಗಾರರಿಂದ ವ್ಯಕ್ತವಾಗಿದೆ. 

‘ವನ್ಯಜೀವಿ ಹಾಗೂ ಜನರ ಮೇಲೆ ಪರಿಣಾಮ ಬೀರುವ ಗಣಿಗಾರಿಕೆ, ವಾಣಿಜ್ಯ ಪ್ರವಾಸೋದ್ಯಮದಂಥ ಯೋಜನೆ ತರುವ ಮೊದಲು ಸ್ಥಳೀಯರು, ಸಂಘ– ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ.  

ಎಲ್ಲೆಲ್ಲಿ ಶೋಧ?: ಸರಗೂರು ಪಟ್ಟಣಕ್ಕೆ ಸಮೀಪದಲ್ಲೇ ಇರುವ ಶಾಂತಿ‍ಪುರ ಗ್ರಾಮದ ಸರ್ವೆ ಸಂಖ್ಯೆ 49, ಮಂಚಹಳ್ಳಿಯ ಸರ್ವೆ ಸಂಖ್ಯೆ 7, ಹುಣಸೇಹಳ್ಳಿಯ ಸರ್ವೆ ಸಂಖ್ಯೆ 54ರ ಅರಣ್ಯ ಪ್ರದೇಶ, ಅಡಹಳ್ಳಿ, ಹಳೆ ಮಂಚನಹಳ್ಳಿ, ಹುನುಗಹಳ್ಳಿ, ಇಟ್ನ, ಕಾಟೂರು, ಕೂಲ್ಯ, ಕುಂದಾಪಟ್ಟಣ, ಕೆ.ಬೆಳತೂರು, ಲಕ್ಕೂರು, ಮನುಗನಹಳ್ಳಿಯಲ್ಲಿ ಅದಿರು ಶೋಧ ನಡೆಯಲಿದೆ. ‌

  • 1,500 ಹೆಕ್ಟೇರ್‌ ಪ್ರದೇಶದಲ್ಲಿ ಪೂರ್ವಾನ್ವೇಷಣೆ

  • ಪೂರ್ವಾನ್ವೇಷಣೆ ವೇಳೆ ಅರಣ್ಯ ಪ್ರದೇಶದಲ್ಲಿ 5 ಕಂದಕ ಹಾಗೂ 20 ಕಡೆ ಕೊಳವೆಬಾವಿ ಕೊರೆಯಲಾಗುತ್ತದೆ

  • ಗಣಿ ಹುಡುಕಾಟದಲ್ಲಿ 0.8 ಟನ್‌ ಅದಿರು ಸಂಗ್ರಹ 

ಇದಿನ್ನೂ ಅದಿರು ಪೂರ್ವಾನ್ವೇಷಣೆ ಪ್ರಸ್ತಾವನೆಯಾಗಿದ್ದರೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗುವ ಇಂಥ ಯೋಜನೆಗಳನ್ನು ಪುರಸ್ಕರಿಸಬಾರದು
-ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಪ್ರಸ್ತಾವಿತ ‍ಪೂರ್ವಾನ್ವೇಷಣೆಯ ಅರಣ್ಯ ಪ್ರದೇಶದಲ್ಲಿ ಹುಲಿ ಚಿರತೆ ಆನೆಗಳಿದ್ದು ಗಣಿಗಾರಿಕೆಗೆ ಪರಿಗಣಿಸಲಾಗದು. ಇಲಾಖೆ ಅಭಿಪ್ರಾಯ ಸಲ್ಲಿಸಲಾಗುವುದು. ಅನುಮೋದನೆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು
-ಕೆ.ಪರಮೇಶ್‌, ಡಿಸಿಎಫ್‌ (ಪ್ರಾದೇಶಿಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.