ADVERTISEMENT

‘ಜಂಗುಳಿ...ಮಾಡೋದೇನು?’: ಅಳಲು ತೋಡಿಕೊಂಡ ಗೃಹ ರಕ್ಷಕ ದಳದ ಸಿಬ್ಬಂದಿ

ಅಳಲು ತೋಡಿಕೊಂಡ ಗೃಹ ರಕ್ಷಕ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಅಪಾರ ಸಂಖ್ಯೆಯ ಜನರು ಸೇರಿದ್ದರು. ನಿಯಂತ್ರಿಸಲು ಪೊಲೀಸರು ಪರದಾಡಿದರು&nbsp;</p></div>

ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಅಪಾರ ಸಂಖ್ಯೆಯ ಜನರು ಸೇರಿದ್ದರು. ನಿಯಂತ್ರಿಸಲು ಪೊಲೀಸರು ಪರದಾಡಿದರು 

   

ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ‘ಸರ್‌, ಇಲ್ಲಿ ಇಷ್ಟೊಂದು ಜನರಿದ್ದಾರೆ. ಇವರನ್ನೆಲ್ಲಾ ನಿಯಂತ್ರಿಸೋದು ಹೇಗೆ? ನೀವು ನಮ್ಮನ್ನು ಬಿಟ್ಟು ಹೋಗಬೇಡಿ. ನಾನಿಲ್ಲೇ ಅಳುತ್ತಾ ಕೂತುಬಿಡುತ್ತೇನೆ’... ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರು ತನ್ನ ಹಿರಿಯ ಸಹೋದ್ಯೋಗಿ ಬಳಿ ಅಲವತ್ತುಕೊಂಡ ಬಗೆ ಇದು.

ADVERTISEMENT

ನೂಕುನುಗ್ಗಲು, ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಹೊತ್ತು ಸಾಗುತ್ತಿದ್ದ ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲು ಹರಸಾಹಸ ಮಾಡುತ್ತಿದ್ದ ಪೊಲೀಸರ ನೆರವಿಗೆಂದು ಗೃಹ ರಕ್ಷಕ ದಳದ ತಂಡವೊಂದನ್ನು ನಿಯೋಜಿಸಲಾಗಿತ್ತು. ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ಬಳಿಯಿಂದ ಪರಸ್ಪರ ಕೈಹಿಡಿದುಕೊಂಡೇ ಸಾಗಿಬಂದಿದ್ದ ಈ ತಂಡದ ಬಹುತೇಕ ಸದಸ್ಯರು ಗಾಬರಿಗೊಂಡಿದ್ದರು.

ಅವರಲ್ಲೊಬ್ಬರನ್ನು ಮಾತಿಗೆ ಎಳೆದಾಗ, ‘ನಮ್ಮನ್ನು ಈವರೆಗೆ ಇಂತಹ ದೊಡ್ಡ ‘ಡ್ಯೂಟಿ’ಗೆ ನಿಯೋಜಿಸಿರಲಿಲ್ಲ. ನಮ್ಮಲ್ಲಿ ಎಷ್ಟೋ ಜನ ಎಂ.ಜಿ.ರಸ್ತೆಯನ್ನೇ ನೋಡಿಲ್ಲ. ಈಗ ದಿಢೀರ್ ಎಂದು ನಮ್ಮನ್ನು ಇಲ್ಲಿಗೆ ಕರೆಸಿದ್ದಾರೆ’ ಎಂದರು. 

‘ಭದ್ರತಾ ಲೋಪ’: ದುರಂತ ಬಗ್ಗೆ ಪ್ರಶ್ನಿಸಿದಾಗ ಬಹುತೇಕ ಮಂದಿ, ‘ಇದು ಭದ್ರತಾ ವೈಫಲ್ಯ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು’ ಎಂದೇ ಉತ್ತರಿಸಿದರು.

ಜಯನಗರ 4ನೇ ಬ್ಲಾಕ್‌ನ ನಿವಾಸಿ ತೇಜಸ್‌, ‘ಎಷ್ಟು ಟಿಕೆಟ್‌ ಇರಲಿದೆ, ಎಷ್ಟು ಮಾರಾಟವಾಗಿದೆ, ಎಷ್ಟು ಜನ ಬರಬಹುದು ಎಂದು ಸರ್ಕಾರ ಮಾಹಿತಿ ನೀಡಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಇಲ್ಲಿ ನೋಡಿದರೆ ಜನಸಾಗರವೇ ಇದೆ. ನಾನು ಬಸ್ಸೂ ಹತ್ತುವುದಿಲ್ಲ, ಮೆಟ್ರೊಗೂ ಹೋಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ದೂರ ನಡೆದುಕೊಂಡೇ ಹೋಗುತ್ತೇನೆ’ ಎಂದರು.

ಎಂಜಿನಿಯರಿಂಗ್‌ ವಿದ್ಯಾರ್ಥಿ ಮೋಹನ್‌, ‘ಆರ್‌ಸಿಬಿ ವಿಜಯೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ, ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದೆ. ಜನ ಮಧ್ಯಾಹ್ನದ ವೇಳೆಗೆ ವಿಧಾನಸೌಧದ ಮುಂಭಾಗ ಹಾಗೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದು ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ’ ಎಂದರು.

‘ಸೆಲಬ್ರೇಟ್‌ ಮಾಡಬೇಕಲ್ಲಾ’: ಸಂಜೆ ಆರರ ವೇಳೆಗೆ ಯುವಕರಿಬ್ಬರು ಕ್ರೀಡಾಂಗಣದತ್ತ ಸಂಭ್ರಮದಲ್ಲಿ ಹೆಜ್ಜೆ ಹಾಕುತ್ತಿದ್ದರು. ‘ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇಷ್ಟು ದಟ್ಟಣೆಯ ಮಧ್ಯೆ ನೀವು ಅಲ್ಲಿಗೆ ಹೋಗುತ್ತಿದ್ದೀರಲ್ಲಾ’ ಎಂದು ಪ್ರಶ್ನಿಸಿದಾಗ, ‘ಆರ್‌ಸಿಬಿ ಗೆದ್ದಿದೆಯಲ್ಲಾ. ಸೆಲಬ್ರೇಟ್‌ ಮಾಡಬೇಕು’ ಎಂದು ಮುಂದೆ ಹೋದರು.

ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ನಂತರ ಹೊರಬಂದ ಯುವಕನನ್ನು ಮಾತನಾಡಿಸಿದಾಗ, ‘ನಾನಂತೂ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್‌ ಮಾಡಿದೆ. 11 ಜನ ಸತ್ತುಹೋದರಂತೆ. ಏನು ಮಾಡಲಾಗುತ್ತದೆ’ ಎಂದು ಮರುಪ್ರಶ್ನೆ ಹಾಕಿದೆ.

ನಾನು ಮತ್ತು ನನ್ನ ಸ್ನೇಹಿತರು ಚಿಕ್ಕಬಳ್ಳಾಪುರದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವವನ್ನು ವೀಕ್ಷಿಸಲು ಬಂದಿದ್ದೆವು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಲಕ್ಷಾಂತರ ಜನ ಸೇರಿದ್ದರು. ನಾವು ಕ್ರೀಡಾಂಗಣದ ಒಳಗಡೆ ಪ್ರವೇಶಿಸುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ, ನನ್ನ ಕಾಲಿನ ಮೇಲೆ ಬ್ಯಾರಿಕೇಡ್‌ ಬಿದ್ದು, ಗಾಯವಾಗಿತ್ತು. ನನ್ನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಬಂದು, ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಜಯೋತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಆದರೆ, ಯಾವುದೇ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರಂತವಾಗಿದೆ.
-ಮಂಜುನಾಥ್, ಚಿಕ್ಕಬಳ್ಳಾಪುರ
ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುವುದನ್ನು ರಾಜ್ಯ ಸರ್ಕಾರ ಅಂದಾಜಿಸಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲ್ಲದ ಪರಿಣಾಮ 11 ಮಂದಿ ಮೃತಪಟ್ಟಿದ್ದಾರೆ. ಭದ್ರತಾ ವೈಫಲ್ಯದಿಂದಲೇ ಈ ಕಾಲ್ತುಳಿತ ಸಂಭವಿಸಿದೆ.
-ಕಿರಣ್‌, ಶಿವಾಜಿನಗರ

ಐಪಿಎಲ್‌ ವಿಜಯೋತ್ಸವ ಶಾಲಾ ಮಕ್ಕಳ ಪರದಾಟ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ಶಾಲಾ ವಾಹನಗಳ ಚಾಲಕರು ನಿಗದಿತ ಸಮಯಕ್ಕೆ ಮಕ್ಕಳನ್ನು ಮನೆಗೆ ತಲುಪಿಸಲು, ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಲು ಪರದಾಡಿದರು.  

ಸಂಚಾರ ದಟ್ಟಣೆ ಪರಿಗಣಿಸಿ, ನಗರದ ಹಲವು ಶಾಲೆಗಳು ಮಧ್ಯಾಹ್ನದ ಬಳಿಕ ರಜೆ ಘೋಷಿಸಿ, ಮಕ್ಕಳನ್ನು ಬೇಗನೆ ಮನೆಗೆ ಕಳುಹಿಸಿದರೂ, ವಾಹನಗಳು ರಸ್ತೆಯಲ್ಲಿ ಸಾಗಲು ಪ್ರಯಾಸ ಪಡಬೇಕಾಯಿತು.

ಬಿಷಪ್‌ ಕಾಟನ್‌ ಗ್ರೂಪ್‌ ಶಾಲೆಗಳು, ಸೇಂಟ್‌ ಜೋಸೆಫ್‌ ಶಾಲೆ ಮತ್ತು ಕಾಲೇಜು, ಸೋಫಿಯಾ ಪ್ರೌಢಶಾಲೆ ಮತ್ತು ಕ್ಯಾಥೆಡ್ರಲ್‌ ಶಾಲೆ ಸೇರಿದಂತೆ ಹಲವು ಶಾಲಾ ಆಡಳಿತ ಮಂಡಳಿಗಳು ಮಧ್ಯಾಹ್ನದ ವೇಳೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದವು. ಕೆಲವೆಡೆ ಪೊಲೀಸರೇ ಶಾಲೆಗಳನ್ನು ಬೇಗನೆ ಬಂದ್‌ ಮಾಡುವಂತೆ ಸೂಚನೆ ನೀಡಿದ್ದರು.

ಸಂಚಾರ ದಟ್ಟಣೆ: ಹೈರಾಣಾದ ಸವಾರರು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದತ್ತ ಲಕ್ಷಾಂತರ ಮಂದಿ ಏಕಕಾಲಕ್ಕೆ ಬಂದಿದ್ದರಿಂದ ಈ ಭಾಗಗಳ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.

ಬುಧವಾರ ಮಧ್ಯಾಹ್ನ ಏಕಕಾಲಕ್ಕೆ ಸ್ವಂತ ಕಾರು, ದ್ವಿಚಕ್ರ ವಾಹನಗಳಲ್ಲಿ ಕ್ರೀಡಾಂಗಣದತ್ತ ದೌಡಾಯಿಸಿದರು. ಭಾರಿ ದಟ್ಟಣೆ ಉಂಟಾಗಿತ್ತು.

ನೃಪತುಂಗ ರಸ್ತೆ, ಕೆ.ಆರ್‌ ವೃತ್ತ, ಕಬ್ಬನ್‌ಪಾರ್ಕ್ ರಸ್ತೆ, ಹಡ್ಸನ್ ವೃತ್ತ, ವಿಠಲ್ ಮಲ್ಯ ರಸ್ತೆ, ರೆಸಿಡೆನ್ಸಿ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ರಾಜಭವನ ರಸ್ತೆ, ಮೇಖ್ರಿ ವೃತ್ತ, ಹೆಬ್ಬಾಳ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ದಟ್ಟಣೆ ಉಂಟಾಗಿ ವಾಹನಗಳು ನಿಂತಲ್ಲೇ ನಿಂತಿದ್ದವು.

ಕ್ರೀಡಾಂಗಣದ ಆಸು-ಪಾಸಿನಲ್ಲಿ ರುವ ಎಲ್ಲ ರಸ್ತೆ‌ಗಳಲ್ಲಿ ಸುಮಾರು 2 ಗಂಟೆ ವಾಹನ ಸವಾರರು ನಿಂತಲ್ಲೇ ನಿಲ್ಲುವ ಸ್ಥಿತಿ ಉಂಟಾಯಿತು.

ಸೇಂಟ್ ಜೋಸೆಫ್ಸ್‌ ಇಂಡಿಯನ್ ಸ್ಕೂಲ್ ಮೈದಾನ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಹಳೆ ಕೆಜಿಐಡಿ ಬಿಲ್ಡಿಂಗ್, ಕಿಂಗ್ಸ್‌ ರಸ್ತೆ (ಕಬ್ಬನ್‌ಪಾರ್ಕ್ ಒಳಬಾಗ)ಯಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿ ವಾಹನಗಳ ನಿಲುಗಡೆಗೆ ಸ್ಥಳ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.