ADVERTISEMENT

Pahalgam Terror Attack: ಭರತ್ ಭೂಷಣ್ ಅಂತಿಮ ದರ್ಶನಕ್ಕೆ ನೂರಾರು ಮಂದಿ

ಪೊಲೀಸ್‌ ಗೌರವದಲ್ಲಿ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 6:11 IST
Last Updated 24 ಏಪ್ರಿಲ್ 2025, 6:11 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅವರ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅವರ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು

   

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅವರ ಪಾರ್ಥಿವ ಶರೀರವು ಗುರುವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ರಸ್ತೆ ಮಾರ್ಗವಾಗಿ ಅವರ ಮನೆಗೆ ಕರೆತರಲಾಯಿತು.

ನಗರದ ಮತ್ತಿಕೆರೆಯಲ್ಲಿ ಇರುವ ನಿವಾಸದ ಎದುರು ಭರತ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಕುಟುಂಬದವರು, ಸ್ನೇಹಿತರು ಮತ್ತು ಕೆಲ ಸಾರ್ವಜನಿಕರೂ ಸೇರಿ ನೂರಾರು ಮಂದಿ ಮನೆ ಬಳಿ ಸೇರಿದ್ದು, ಅಂತಿಮ ದರ್ಶನ ಪಡೆದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಭರತ್ ಅವರ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ಕುಟುಂಬದವರೊಂದಿಗೆ ಕೆಲಕಾಲ ಮಾತನಾಡಿ, ಸಾಂತ್ವನ ಹೇಳಿದರು. ಪೊಲೀಸ್‌ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೃತರ ಅಂತಿಮ ದರ್ಶನ ಪಡೆದರು.

‘ಅಮಾಯಕ ಜನರನ್ನು ಕೊಲ್ಲುವುದು ಹ್ಯೇಯಕೃತ್ಯ’

‘ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ,ಜ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ಹಾಡುಹಗಲೇ, ತಮ್ಮ ಕುಟುಂಬದವರ ಎದುರು ಕೊಲ್ಲುವುದು ಹ್ಯೇಯಕೃತ್ಯ. ಕಾಶ್ಮೀರದಲ್ಲಿ ಈ ಹಿಂದೆಯೂ ಪುಲ್ವಾಮಾ ಬಾಲಾಕೋಟ್ ಘಟನೆ ನಡೆದಿದ್ದು, ಪುನ: ಅಂತಹ ಘಟನೆ ಮರುಕಳಿಸಿದೆ. ಇಂತಹ ಘಟನೆ ನಡೆಯಲು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವೂ ಇರಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

‘ಕನ್ನಡಿಗರಾದ ಭರತ್ ಭೂಷಣ್, ಮಂಜುನಾಥ್ ರಾವ್ ಹಾಗೂ ಬೆಂಗಳೂರಿನಲ್ಲಿ ನೆಲಿಸಿದ್ದ ಮಧುಸೂದನ್ ಅವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಭರತ್ ಭೂಷಣ್ ಕುಟುಂಬದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬದವರನ್ನು ಸಚಿವ ಮಧುಬಂಗಾರಪ್ಪ ಅವರು ಭೇಟಿಯಾಗಿದ್ದು, ಕುಟುಂಬಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ ₹ 10 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಕುಟುಂಬಕ್ಕೆ ಸರ್ಕಾರದ ಬೆಂಬಲವಿದೆ’ ಎಂದರು.

‘ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ’ ಎಂದರು.

175 ಕನ್ನಡಿಗರು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ 175 ಕನ್ನಡಿಗರನ್ನು ರಾಜ್ಯ ಸರ್ಕಾರದ ವತಿಯಿಂದಲೇ ವಿಶೇಷ ವಿಮಾನದಲ್ಲಿ ಕರೆತರಲಾಗುತ್ತಿದೆ. ಎಲ್ಲರೂ ಸುರಕ್ಷಿತವಾಗಿ ಬರಲಿದ್ದಾರೆ. ಅವರ ಕುಟುಂಬದವರು ಮತ್ತು ಸ್ನೇಹಿತರು ಗಾಬರಿಯಾಗುವ ಅವಶ್ಯಕತೆ ಇಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.