ಕೆ.ಎನ್.ರಾಜಣ್ಣ, ಆರ್.ರಾಜೇಂದ್ರ
ರಾಜ್ಯದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಚದುರಂಗದಾಟವು ತಿಂಗಳಿಗೊಮ್ಮೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಕೆಲವು ದಿನ ಭಾರಿ ಸದ್ದು ಮಾಡಿದ ‘ಮಧುಬಲೆ’ಯ ಪ್ರಸಂಗವೂ ಅಧಿಕಾರಕ್ಕಾಗಿ ನಾಜೂಕಿನಿಂದ ನೇಯ್ದ ಚಕ್ರವ್ಯೂಹದ ಭಾಗವೇ?
ಮಧುಬಲೆ ಯತ್ನ, ಅದನ್ನು ಬಹಿರಂಗಗೊಳಿಸಿದ ಬಗೆ, ಬಳಿಕ ನಡೆಯುತ್ತಿರುವ ವಿದ್ಯಮಾನಗಳನ್ನು ಜೋಡಿಸಿ ನೋಡಿದರೆ, ಈ ಪ್ರಕರಣದ ಹಿಂದೆ ನಿಪುಣ ತಂತ್ರಗಾರಿಕೆ ಇರುವುದನ್ನು ಅಲ್ಲಗಳೆಯಲಾಗದು. ತಮ್ಮನ್ನು ಮಧುಬಲೆಗೆ ಸಿಲುಕಿಸುವ ಪ್ರಯತ್ನ ಮೂರು ಬಾರಿ ನಡೆದಿತ್ತು ಎಂದು ವಿಧಾನಸಭೆಯಲ್ಲೇ ಹೇಳಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಗೃಹ ಸಚಿವರಿಗೆ ಸಾಕ್ಷ್ಯವನ್ನೂ ಕೊಡುವುದಾಗಿ ತಿಳಿಸಿದ್ದರು. ಕೇಂದ್ರ, ರಾಜ್ಯಗಳ 48 ನಾಯಕರು ‘ಮಧುಬಲೆ’ಗೆ ಸಿಲುಕಿರುವ ಪೆನ್ ಡ್ರೈವ್‌ಗಳಿವೆ ಎಂದಿದ್ದರು. ವಿಧಾನ ಪರಿಷತ್‌ನ ಸದಸ್ಯರೂ ಆಗಿರುವ ಅವರ ಮಗ ಆರ್.ರಾಜೇಂದ್ರ, ‘ನನ್ನನ್ನು ಮತ್ತು ನನ್ನ ತಂದೆಯನ್ನು ಮಧುಬಲೆಗೆ ಕೆಡವುವ ಪ್ರಯತ್ನ ನಡೆದಿತ್ತು’ ಎಂದು ಅಪ್ಪನ ಮಾತನ್ನು ದೃಢೀಕರಿಸಿದ್ದರು.
ರಾಜಣ್ಣ ಹಾಗೂ ರಾಜೇಂದ್ರ ಅವರ ಮಾತಿನ ವರಸೆ ಬದಲಾಗುತ್ತಲೇ ಇದೆ. ‘ಸಾಕ್ಷ್ಯವಿಲ್ಲ’ ಎಂದು ರಾಜಣ್ಣ ಹೇಳಿದರೆ, ‘ಅಂತಹ ಯತ್ನ ನಡೆದಿಲ್ಲ; ನಡೆದಿದ್ದು ಕೊಲೆ ಯತ್ನ’ ಎಂದು ರಾಜೇಂದ್ರ ಹೇಳಿದ್ದಾರೆ. ಚುನಾಯಿತ ಜನಪ್ರತಿನಿಧಿಗಳಾಗಿರುವ ಅಪ್ಪ–ಮಗ ಈವರೆಗೂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವ ಧೈರ್ಯ ಮಾಡಿಲ್ಲ. ದೂರು ಸಲ್ಲಿಸದಂತೆ ಇವರನ್ನು ತಡೆದಿರುವುದು ‘ಭಯ’ ಅಥವಾ ‘ಟ್ರ್ಯಾಪ್’ ಯಾವುದು?
ಇದರ ವಿಶ್ಲೇಷಣೆಗೆ ಮುನ್ನ, ರಾಜಕೀಯ ಘಟನೆಗಳ ಬಗ್ಗೆಯೂ ಕಣ್ಣುಹಾಯಿಸುವುದು ಸೂಕ್ತವಾದೀತು. ನಾಯಕತ್ವ ಬದಲಾವಣೆ ವಿಚಾರ ಕೆಲವು ತಿಂಗಳಿಂದ ಸದ್ದು ಮಾಡುತ್ತಿದೆ. ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಹೇಳುತ್ತಿದ್ದಾರೆ. ಐದು ವರ್ಷ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ. ಈ ಹಗ್ಗಜಗ್ಗಾಟದ ಮಧ್ಯೆಯೇ, ಸಿದ್ದರಾಮಯ್ಯ ಅವರು ಕುರ್ಚಿಯಿಂದ ಇಳಿಯುವ ಸನ್ನಿವೇಶ ಬಂದರೆ, ಮುಖ್ಯಮಂತ್ರಿ ಹುದ್ದೆಯನ್ನು ದಲಿತ ಸಮುದಾಯದವರಿಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಹಲವು ಸಚಿವರು ಮಂಡಿಸುತ್ತಿದ್ದಾರೆ. ಸಚಿವರ ಈ ಗುಂಪು, ಡಿ.ಕೆ. ಶಿವಕುಮಾರ್ ಅವರು ನಿರ್ವಹಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದೆ. ಭೋಜನ ಕೂಟದ ಹೆಸರಿನಲ್ಲಿ ಒಟ್ಟಿಗೆ ಕೂಡಿ ಚರ್ಚಿಸುವುದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸುವುದು, ದಲಿತರ ಸಮಾವೇಶದ ಪ‍್ರಸ್ತಾವಗಳು ಇದ್ದವು. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಈ ಬಣದ ಪ್ರಭಾವಿಯೊಬ್ಬರು ಮುಖ್ಯಮಂತ್ರಿ ಹುದ್ದೆಯ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಈ ಬಣದ ವಿರುದ್ಧವಾಗಿ ಡಿ.ಕೆ. ಶಿವಕುಮಾರ್ ಅವರು ತಮ್ಮದೇ ಆದ ಕಾರ್ಯತಂತ್ರವನ್ನು ಹೊಸೆಯುತ್ತಲೇ ಬಂದಿದ್ದಾರೆ. ತೆರೆಮರೆಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಬೆನ್ನಲ್ಲೇ, ಚಿನ್ನ ಕಳ್ಳ ಸಾಗಣೆ ಪ್ರಕರಣ ಸದ್ದು ಮಾಡಿತು.
‘ಮಧುಬಲೆ’ಯ ಯತ್ನ ಸ್ಫೋಟವಾಗುವ ಕೆಲ ದಿನಗಳ ಮೊದಲಷ್ಟೇ, ಚಿನ್ನ ಕಳ್ಳಸಾಗಣೆಯ ಪ್ರಕರಣ ಪತ್ತೆಯಾಯಿತು. ವಿದೇಶದಿಂದ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ಹಾಗೂ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಮಲಮಗಳು ರನ್ಯಾ ರಾವ್ ಅವರನ್ನು ರೆವೆನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಇ) ಬಂಧಿಸಿತ್ತು. ಈ ಪ್ರಕರಣದ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ತನಿಖಾ ಸಂಸ್ಥೆಗಳು, ಪ್ರಭಾವಿ ಸಚಿವರೊಬ್ಬರ ನಂಟು ಇದೆ ಎಂದಿದ್ದವು. ಸರ್ಕಾರದಲ್ಲಿ ಇದು ಕಂಪನವನ್ನೇ ಎಬ್ಬಿಸಲಿದೆ ಎಂಬಷ್ಟರಮಟ್ಟಿಗೆ ಇದರ ಪ್ರಭಾವ ಇತ್ತು ಎನ್ನಲಾಗಿತ್ತು.
ಅದೇ ವೇಳೆ ಅಧಿವೇಶನವೂ ನಡೆಯುತ್ತಿತ್ತು. ಚಿನ್ನ ಕಳ್ಳ ಸಾಗಣೆ ಪ್ರಕರಣವನ್ನು ವಿರೋಧ ಪಕ್ಷದ ನಾಯಕರು ಸದನದಲ್ಲಿ ಪ್ರಸ್ತಾಪಿಸಿದ್ದರು. ಕೇಂದ್ರದ ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆ ಕೈಗೊಂಡಿರುವುದರಿಂದಾಗಿ ತಮಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡಿದ್ದರು.
ಇದೇ ವೇಳೆ, ಸಚಿವರೊಬ್ಬರನ್ನು ಮಧುಬಲೆಗೆ ಕೆಡವಲು ಯತ್ನಿಸಿದ ವಿಷಯ ಮಾಧ್ಯಮಗಳಲ್ಲಿ ಹರಿದಾಡಿತು. ಸಚಿವ ರಾಜಣ್ಣ ಅವರ ಆಪ್ತರೂ ಆಗಿರುವ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಇದನ್ನು ದೃಢಪಡಿಸಿದರು.
ಸದನದಲ್ಲಿ ಇದನ್ನು ಪ್ರಸ್ತಾಪಿಸಿದ ಬಿಜೆಪಿಯ ವಿ.ಸುನಿಲ್ ಕುಮಾರ್ ಸರ್ಕಾರದಿಂದ ಸ್ಪಷ್ಟನೆ ಬಯಸಿದರು. ಆಡಳಿತ–ವಿರೋಧ ಪಕ್ಷದ ಸದಸ್ಯರು ಈ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ, ಆಡಳಿತ ಪಕ್ಷದ ಕಡೆಯಿಂದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಚೀಟಿಯೊಂದು ಬಂದಿತು. ಅವರು, ಸಚಿವ ರಾಜಣ್ಣ ಹೆಸರು ಹೇಳಿಯೇ ಬಿಟ್ಟರು. ರಾಜಣ್ಣ ಕೂಡ ಅದನ್ನು ಖಚಿತಪಡಿಸಿದರು. ಬಳಿಕ ಸದನಕ್ಕೆ ಬಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪರಿಶಿಷ್ಟ ಪಂಗಡದ ನಾಯಕರಾದ ರಾಜಣ್ಣ ಈ ವಿಚಾರವನ್ನು ಮೊದಲೇ ತಮಗೆ ತಿಳಿಸಿದ್ದರು’ ಎಂದರು. ಮಧುಬಲೆ ಯತ್ನದ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಹನಿಟ್ರ್ಯಾಪ್ ಮಾಡುವವರು ಸುಮ್ಮನೆ ನಿಮ್ಮ ಹತ್ತಿರಕ್ಕೆ ಬರುತ್ತಾರೆಯೇ? ನೀವು ಹಲೋ ಎಂದರೆ ಅವರೂ ಹಲೋ ಎನ್ನುತ್ತಾರೆ’ ಎಂದು ಹೇಳಿದ್ದಕ್ಕೆ, ಸಿದ್ದರಾಮಯ್ಯ ಆಪ್ತ ಬಣದ ಶಾಸಕರು ತಿರುಗೇಟು ಕೊಟ್ಟಿದ್ದೂ ನಡೆಯಿತು.
ಆದರೆ, ಇಲ್ಲಿಯವರೆಗೂ ದೂರು ಕೊಡಲಿಲ್ಲ. ಸಚಿವರೊಬ್ಬರ ಮೇಲೆ ನಡೆದ ಪ್ರಕರಣ ಸದನದಲ್ಲೇ ಪ್ರಸ್ತಾಪವಾದರೂ ಮುಖ್ಯಮಂತ್ರಿ, ಸಭಾಧ್ಯಕ್ಷರಾಗಲಿ ತನಿಖೆಗೆ ಆದೇಶ ಹೊರಡಿಸಿಲ್ಲ. ಮೌಖಿಕ ಸೂಚನೆ ಮೇರೆಗಷ್ಟೇ ತನಿಖೆ ಆರಂಭವಾಗಿದೆ. ಇದನ್ನು ನೋಡಿದರೆ, ಮಧುಬಲೆಯ ಯತ್ನವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಇಂತಹ ಹೀನಕೃತ್ಯಗಳು ನಡೆಯಗೊಡದಂತೆ ಮಾಡುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ. ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಧುಬಲೆಯ ಯತ್ನದ ವಿಷಯ ಎಲ್ಲ ನಾಯಕರಿಗೂ ತಿಳಿದಿತ್ತು. ನಿರ್ದಿಷ್ಟ ಸನ್ನಿವೇಶನದಲ್ಲಿ ಅದು ಹೊರಗೆ ಬಂತು. ಅದಕ್ಕೊಂದು ಉದ್ದೇಶವಿತ್ತು ಎಂಬುದು ಸ್ಪಷ್ಟ. ಈ ಪ್ರಕರಣದಲ್ಲಿ ಪ್ರಭಾವಿ ನಾಯಕರೊಬ್ಬರ ಜತೆಗೆ ಗುರುತಿಸಿಕೊಂಡ ಯುವ ನಾಯಕರಿಬ್ಬರ ‘ಕೈ’ವಾಡ ಇದೆ ಎಂದು ಹೇಳಲಾಗುತ್ತಿದ್ದು, ಹೆಚ್ಚೆಂದರೆ ಅವರನ್ನು ವಶಕ್ಕೆ ಪಡೆದು ಪ್ರಭಾವಿಯು ಮುಂಚಲಿಸದಂತೆ ಚಕ್ರವ್ಯೂಹ ನಿರ್ಮಿಸುವ ಆಶಯವಷ್ಟೇ ಇದ್ದಂತೆ ಕಾಣಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.