
ಬೆಂಗಳೂರು: ಎ.ಐ ಶೃಂಗಸಭೆಯ ‘ಎಕ್ಸ್ ಪೋ’ ನಡೆಯುತ್ತಿದ್ದ ದೆಹಲಿಯ ‘ಭಾರತ ಮಂಟಪ’ದ ಹಾಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ‘ಇದು ಸರಿಯಲ್ಲ’ ಎಂದಿದ್ದಾರೆ.
‘ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಸರಿಯಾದ ಹಾದಿಯಲ್ಲಿತ್ತೇ ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ಆದರೆ, ಕೇಂದ್ರ ಸರ್ಕಾರ ಅಥವಾ ಬಿಜೆಪಿ ನಾಯಕರು ಒಂದು ವೇಳೆ ಇಷ್ಟೊಂದು ಮುಜುಗುರಕ್ಕೊಳಗಾಗಿದ್ದರೆ, ವಿಶ್ವವಿದ್ಯಾನಿಲಯವೊಂದು ಮತ್ತು ಇತರ ಕೆಲವು ಕಂಪನಿಗಳು ಚೀನಾದ ಉತ್ಪನ್ನಗಳನ್ನು ತಮ್ಮದೇ ಎಂದು ಬಿಂಬಿಸಿಕೊಂಡಿರುವ ಬಗ್ಗೆಯೂ ಇದೇ ರೀತಿಯಲ್ಲಿ ಮುಜುಗರಕ್ಕೊಳಗಾಗಬೇಕಿತ್ತು’ ಎಂದು ಛೇಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶೃಂಗಸಭೆಯಲ್ಲಿ ಗಾಲ್ಗೋಟಿಯಾ ವಿಶ್ವವಿದ್ಯಾನಿಲಯವು ಚೀನಾ ನಿರ್ಮಿತ ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿದೆ ಎಂಬ ಆರೋಪದ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಎ.ಐ ಶೃಂಗಸಭೆಯು ಸಂಪೂರ್ಣ ಗೊಂದಲಮಯವಾಗಿತ್ತು. ಅನ್ವೇಷಕರು, ಉದ್ಯಮಿಗಳಿಗಿಂತಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಕೇಂದ್ರಬಿಂದುವಾಗಿದ್ದರು’ ಎಂದು ಟೀಕಿಸಿದ್ದಾರೆ.
‘ನಾನು ಶೃಂಗಸಭೆಯಲ್ಲಿ ಭಾಗವಹಿಸಿದ್ದೆ. ನಾನೂ ಇಂತಹ ಹಲವು ಶೃಂಗಸಭೆಗಳನ್ನು ಆಯೋಜಿಸಿದ್ದೇನೆ. ಆದರೆ, ಅನ್ವೇಷಕರು, ಉದ್ಯಮಿಗಳಿಗಿಂತಲೂ ಹೆಚ್ಚಾಗಿ ಪ್ರಧಾನಮಂತ್ರಿಯೇ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಇಂತಹ ಗೊಂದಲಮಯ ಶೃಂಗಸಭೆಯನ್ನು ನಾನು ಎಂದೂ ನೋಡಿರಲಿಲ್ಲ’ ಎಂದು ಹೇಳಿದ್ದಾರೆ.
‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಮಾರಕ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಘಟನೆಗೆ ಸಂಬಂಧ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಗಳಾದ ಬಿಹಾರದ ಕೃಷ್ಣ ಹರಿ ಮತ್ತು ಕುಂದನ್ ಯಾದವ್, ರಾಷ್ಟ್ರೀಯ ಸಂಯೋಜಕ ತೆಲಂಗಾಣದ ನರಸಿಂಹ ಯಾದವ್ ಹಾಗೂ ಉತ್ತರ ಪ್ರದೇಶ ಪೂರ್ವ ಘಟಕದ ಉಪಾಧ್ಯಕ್ಷ ಅಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.