
ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಹೊಸ ಕಾಯ್ದೆಗೆ ‘ನಾಥೂರಾಮ್ ಗೋಡ್ಸೆ ವಿಕಸಿತ ಭಾರತ’ ಎಂಬ ಹೆಸರನ್ನಾದರೂ ಇಡಿ. ಆದರೆ, ಬಡವರ ಉದ್ಯೋಗ ಕಸಿದುಕೊಳ್ಳುವ ಕೆಲಸ ಮಾಡಬೇಡಿ’ ಎಂದು ಕೇಂದ್ರ ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
‘ವಿಬಿ ಜಿ ರಾಮ್ ಜಿ’ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಸರ್ಕಾರ ಮಂಡಿಸಿದ ನಿರ್ಣಯ ಬೆಂಬಲಿಸಿ ಮಾತನಾಡಿದ ಪ್ರಿಯಾಂಕ್, ‘ನಮ್ಮ ಹೋರಾಟ ಕೇವಲ ಹೆಸರು ಬದಲಾವಣೆಗೆ ಸೀಮಿತವಲ್ಲ. ಯೋಜನೆಯ ಮೂಲ ಸ್ವರೂಪ ಬದಲಾವಣೆ ಮಾಡಿರುವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಈ ವೇಳೆ, ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಎದುರು ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರೆ, ಬಿಜೆಪಿಯ ಆರಗ ಜ್ಞಾನೇಂದ್ರ ಅವರು ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಬೇಕೆಂಬ ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಯೋಜನೆಯನ್ನು ಬದಲಾವಣೆ ಮಾಡಲಾಗಿದೆ. ಸ್ವಾಭಿಮಾನದಿಂದ ಉದ್ಯೋಗ ಮಾಡುವ ಕಾರ್ಮಿಕರನ್ನು ಗುತ್ತಿಗೆದಾರರ ಅಡಿಯಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ರೂಪಿಸಿ ಅವರನ್ನು ಗುಲಾಮರನ್ನಾಗಿಸುವ ಪ್ರಯತ್ನ ಹೊಸ ಕಾಯ್ದೆಯ ಮೂಲಕ ನಡೆದಿದೆ. ಕಾಮಗಾರಿಗಳನ್ನು ಆಯ್ಕೆ ಮಾಡುವಲ್ಲಿ ಗ್ರಾಮ ಸಭೆಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ, ಪಂಚಾಯಿತಿ ವ್ಯವಸ್ಥೆಯನ್ನೇ ಹಾಳು ಮಾಡುವ, ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಿ ಆರ್ಥಿಕ ಭಯೋತ್ಪಾದನೆ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಮಾಡುತ್ತಿದೆ’ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.
‘ನರೇಗಾ ಯೋಜನೆ ಉತ್ತಮವಾದ ಯೋಜನೆ ಎಂದು ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗಳೂ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಶ್ಲಾಘಿಸಿವೆ. ವಿಶ್ವ ಸಂಸ್ಥೆಯ ಸಭೆಯಲ್ಲಿಯೇ ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿಯವರು, ಕೋಟ್ಯಂತರ ಬಡ ಕುಟುಂಬಗಳಿಗೆ ನರೇಗಾ ಆಸರೆ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ನರೇಗಾ ಯೋಜನೆಯನ್ನು ಹೆಮ್ಮೆಯ ಯೋಜನೆ ಎಂದಿದ್ದಾರೆ’ ಎಂದರು.
ಗೇಮ್ ಅಲ್ಲ, ಬರೀ ನೇಮ್ ಚೇಂಜಿಂಗ್: ‘ಕೇಂದ್ರದ ಬಿಜೆಪಿ ಸರ್ಕಾರ ಏನೂ ಮಾಡುವುದಿಲ್ಲ. ಯಾವ ಗೇಮ್ ಕೂಡಾ ಅದು ಚೇಂಜ್ ಮಾಡುವುದಿಲ್ಲ. ಅದಕ್ಕೆ ಗೊತ್ತಿರುವುದು ಗೇಮ್ ಚೇಂಜಿಂಗ್ ಅಲ್ಲ. ಬರೀ ನೇಮ್ ಚೇಂಜಿಂಗ್ ಅಷ್ಟೇ’ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದರು. ಯುಪಿಎ ಸರ್ಕಾರ ಅವಧಿಯಲ್ಲಿ ಜಾರಿಯಲ್ಲಿದ್ದ, ಎನ್‌ಡಿಎ ಸರ್ಕಾರ ಅವಧಿಯಲ್ಲಿ ಮರು ನಾಮಕರಣ ಮಾಡಿದ 50ಕ್ಕೂ ಹೆಚ್ಚು ಯೋಜನೆಗಳ ಪಟ್ಟಿಯನ್ನು ಪ್ರಿಯಾಂಕ್ ಖರ್ಗೆ ಓದಿದರು.
ಬಿಜೆಪಿ–ಜೆಡಿಎಸ್ ಸದಸ್ಯರು ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದರು. ಬುಧವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ ಮುಂದುವರೆಸಿದರು. ಗದ್ದಲದ ಮಧ್ಯೆಯೇ ಕಾಯ್ದೆ ಕುರಿತು ಚರ್ಚೆಗೆ ಸಭಾಧ್ಯಕ್ಷರು ಸದಸ್ಯರಿಗೆ ಅವಕಾಶ ನೀಡಿದರು.
ಮನುವಾದಿ ಕಾಯ್ದೆ
ವಿಬಿ ಜಿ ರಾಮ್‌ಜಿ ಕಾಯ್ದೆಯು ಸಂವಿಧಾನ ವಿರೋಧಿ. ಈ ಕಾಯ್ದೆಯನ್ನು ಜಾರಿ ಮಾಡಲು ಸಂವಿಧಾನ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಇದು ಮನುವಾದಿ, ಮನುಸ್ಮೃತಿ ಪ್ರತೀಕವಾದ ಕಾಯ್ದೆ. ಬಡವರು, ಮಹಿಳೆಯರು, ದಲಿತರುಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುವ ಉದ್ದೇಶದ ಕಾಯ್ದೆಯಾಗಿದೆ. ಇದಕ್ಕೆ ರಾಮನ ಹೆಸರಿಟ್ಟು ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡತನ ಹೆಚ್ಚಾಗಿದೆ.– ಶರತ್ ಬಚ್ಚೇಗೌಡ, ಕಾಂಗ್ರೆಸ್
ಬಡವರ ಹಕ್ಕು ಕಸಿಯಲಾಗಿದೆ
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಒಂದೂ ಹೊಸ ಕಾರ್ಯಕ್ರಮ ಜಾರಿ ಮಾಡಿಲ್ಲ. ಮನಮೋಹನ್ ಸಿಂಗ್ ಅವರ ಕಾರ್ಯಕ್ರಮಗಳಿಗೆ ಬೇರೆ ಹೆಸರಿಟ್ಟು ತಮ್ಮದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನರೇಗಾ ಮೂಲಕ ಬಡವರನ್ನು ಮೇಲಕ್ಕೆತ್ತಲು ಮನಮೋಹನ್ ಸಿಂಗ್ ಪ್ರಯತ್ನಿ ಸಿದ್ದರು. ವಿಬಿ ಜಿ ರಾಮ್ ಜಿ ಮೂಲಕ ಬಿಜೆಪಿಯವರು ಬಡವರ ಹಕ್ಕನ್ನು ಕಸಿದುಕೊಂಡಿದ್ದಾರೆ– ಬಸವರಾಜ ರಾಯರಡ್ಡಿ, ಕಾಂಗ್ರೆಸ್
ಭ್ರಷ್ಟಾಚಾರಕ್ಕೆ ಕಡಿವಾಣ
ನರೇಗಾ ದೋಷ ಪೂರಿತ ಕಾಯ್ದೆಯಾಗಿತ್ತು. ಇದು ವ್ಯಾಪಕ ಭ್ರಷ್ಟಾಚಾರಕ್ಕೆ ಮೂಲವಾಗಿತ್ತು. ವಿಬಿ ಜಿರಾಮ್ ಜಿ ಕಾಯ್ದೆಯು ಎಲ್ಲ ಹಂತಗಳ ಭ್ರಷ್ಟಾಚಾರಕ್ಕೆಡಿವಾಣ ಹಾಕುತ್ತದೆ. ಗ್ರಾಮೀಣ ಮಟ್ಟದಲ್ಲಿ ಎಲ್ಲ ಅರ್ಹರಿಗೂ ಉದ್ಯೋಗ ದೊರಕುತ್ತದೆ. ಹಿಂದಿನಂತೆ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ದುಡ್ಡ ಹೊಡೆಯಲು ಆಗಲ್ಲ. ಇದು ಕಾಂಗ್ರೆಸ್‌ನ ಚಿಂತೆಗೆ ಕಾರಣ. ಈ ಕಾಯ್ದೆ ತಂದಿದ್ದಕ್ಕಾಗಿ ಮೋದಿ ಅವರನ್ನು ಅಭಿನಂದಿಸುತ್ತೇನೆ.– ಬಸನಗೌಡಪಾಟೀಲ ಯತ್ನಾಳ,ಬಿಜೆಪಿ ಉಚ್ಛಾಟಿತ ಶಾಸಕ
ಗುಲಾಮಗಿರಿಯ ಪ್ರತೀಕ
ನಮ್ಮದು ಹೇ ರಾಮ್ ಸಂಸ್ಕೃತಿ. ಜೀ ರಾಮ್ ಎಂದರೆ, ಅದೊಂದು ಗುಲಾಮಗಿರಿಯ ಪ್ರತೀಕದಂತೆ. ನಾವು ಹೇ ರಾಮ್ ಎನ್ನುವುವರು. ನಮ್ಮ ಶ್ರೀರಾಮ ಸೌಮ್ಯ, ಸೌಜನ್ಯದ ಮೂರ್ತಿ. ಮೊದಲು ಶ್ರೀ ರಾಮನಲ್ಲಿ ಆಯುಧ ಇರಲಿಲ್ಲ. ಹನುಮಂತನಲ್ಲಿಯೂ ಇರಲಿಲ್ಲ. ಈಗ ಸೌಜ್ಯನಮಯಿ ರಾಮನ ಕೈಯಲ್ಲಿಯೂ ಆಯುಧ ನೀಡಿದ್ದೀರಿ.– ಬಿ.ಆರ್. ಪಾಟೀಲ, ಕಾಂಗ್ರೆಸ್
ನಿರ್ಣಯವೇ ಅಕ್ರಮ: ಅಶೋಕ
‘ವಿಬಿ ಜಿ ರಾಮ್ ಜಿ ಕಾಯ್ದೆ ಪಾರದರ್ಶಕವಾಗಿದ್ದು, ಕಾಂಗ್ರೆಸ್ ಏಜೆಂಟ್‌ಗಳಿಗೆ ಅಕ್ರಮ ನಡೆಸಲು ಸಮಸ್ಯೆ ಆಗಿರುವುದರಿಂದ ವಿರೋಧ ಕೇಳಿಬರುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ನಿಯಮಬಾ ಹಿರವಾಗಿ ನಿರ್ಣಯ ತಂದಿದ್ದು, ಅದನ್ನು ವಿರೋಧಿಸಿದ್ದೇವೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
ಕಲಾಪ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಾಡಿರುವುದೇ ಅಕ್ರಮ’ ಎಂದರು.
‘ನಿರ್ಣಯ ಮಂಡಿಸುವ ಮೊದಲು ಏಳು ದಿನಗಳ ಮೊದಲು ಸೂಚನೆ ನೀಡಿ ಚರ್ಚೆ ಮಾಡಬೇಕಿತ್ತು. ಆದರೆ, ಏಕಾಏಕಿ ನಿರ್ಣಯ ತಂದು ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ’ ಎಂದು ಆರೋಪಿಸಿದರು.‘ರಾಜ್ಯ ಸರ್ಕಾರವು ನರೇಗಾ ಯೋಜನೆಯಡಿ ಭಾರಿ ಭ್ರಷ್ಟಾಚಾರ ನಡೆಸಿದೆ. ಸ್ವಜಪಕ್ಷ ಪಾತ, ಬೋಗಸ್ ಬಿಲ್, ಕಾಂಗ್ರೆಸ್ ಏಜೆಂಟ್‌ಗಳಿಗೆ ಕಾಮಗಾರಿ ಹೀಗೆ ಮೊದಲಾದ ರೀತಿಯಲ್ಲಿ ಲೂಟಿ ಮಾಡಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.