ADVERTISEMENT

ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:42 IST
Last Updated 24 ಜುಲೈ 2021, 19:42 IST
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕಾರ್ಯಕರ್ತರು ಮೊಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕಾರ್ಯಕರ್ತರು ಮೊಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಗರ್ಭಿಣಿಯರು ಹಾಗೂ ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸಲು ನೀಡಲಾಗುವ ಮೊಟ್ಟೆಯಲ್ಲೂ ಹಣ ಮಾಡಲು ಮುಂದಾದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ನಿವಾಸಕ್ಕೆ ಮೆರವಣಿಗೆಯಲ್ಲಿ ತೆರಳಲು ಮುಂದಾದ ಕಾಂಗ್ರೆಸ್‌ನ ಮಹಿಳಾ ಮತ್ತು ಯುವ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಶಶಿಕಲಾ ಜೊಲ್ಲೆ ವಿರುದ್ಧ ಘೋಷಣೆ ಕೂಗಿ, ಪ್ರತಿ ಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಬಳಿಕ ಮೆರವಣಿಗೆ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು.

ADVERTISEMENT

‘ಮಕ್ಕಳ ಪೌಷ್ಟಿಕ ಆಹಾರದ ವಿಚಾರದಲ್ಲಿಯೂ ಅವ್ಯವಹಾರ ನಡೆಸಿರುವುದು ಅಕ್ಷಮ್ಯ. ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡದಿದ್ದರೆ, ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಪುಷ್ಪಾ ಎಚ್ಚರಿಕೆ ನೀಡಿದರು.

ತನಿಖೆಯಾಗಲಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಷ್ಪಾ, ಮಾಜಿ ಸಚಿವೆ ಉಮಾಶ್ರೀ ಮತ್ತು ಶಾಸಕಿ ಕುಸುಮಾ ಎಚ್‌ ಅವರು ಪ್ರಕರಣದ ತನಿಖೆಗೆ ಒತ್ತಾಯಿಸಿದರು.

‘ಮಹಿಳೆಯರು ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ದೂರ ಮಾಡಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೊಟ್ಟೆ ನೀಡುವ ಯೋಜನೆ ಆರಂಭಿಸಲಾಗಿತ್ತು. ಆದರೆ ಈ ಮೊಟ್ಟೆಯಿಂದ ಕಮಿಷನ್ ಪಡೆಯುವ ಹುನ್ನಾರ ನಡೆಯುತ್ತಿರುವುದು ದುರದೃಷ್ಟಕರ. ಇದು ಮಹಿಳೆಯರು ಮತ್ತು ಮಕ್ಕಳಿಗೆ ಮಾಡಿದ ದೊಡ್ಡ ದ್ರೋಹ’ ಎಂದೂ ಟೀಕಿಸಿದರು.

ಖಾಸಗಿ ಸುದ್ದಿವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆ ನಡೆಸಿ, ಮೊಟ್ಟೆ ಪೂರೈಕೆಗೆ ಟೆಂಡರ್‌ಗೆ ಜೊಲ್ಲೆ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.