ADVERTISEMENT

ಸಾರ್ವಜನಿಕರೆದುರೇ ಅವಾಚ್ಯ ಶಬ್ದ ಬಳಸಿ, ರೈತನ ಮೇಲೆ ಹಲ್ಲೆ ಮಾಡಿದ ಪಿಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:57 IST
Last Updated 12 ಆಗಸ್ಟ್ 2022, 14:57 IST
ರೈತನ ಮೇಲೆ ಪಿಎಸ್‌ಐ ಮಣಿಕಂಠ ಹಲ್ಲೆ ಮಾಡುತ್ತಿರುವುದು
ರೈತನ ಮೇಲೆ ಪಿಎಸ್‌ಐ ಮಣಿಕಂಠ ಹಲ್ಲೆ ಮಾಡುತ್ತಿರುವುದು    

ಬಳ್ಳಾರಿ/ ಕುರುಗೋಡು: ಸಾರ್ವಜನಿಕರೆದುರೇ ’ಖಾಕಿ ದರ್ಪ‘ ತೋರಿದ ಆರೋಪಕ್ಕೆ ಒಳಗಾದ ಪಿಎಸ್‌ಐ ಮಣಿಕಂಠ ರೈತರೊಬ್ಬರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಘಟನೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ರೈತನ ಮೇಲೆ ಪಿಎಸ್‌ಐ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಶುಕ್ರವಾರ ಸರ್ಕಲ್‌ ಇನ್‌ಸ್ಪೆಕ್ಟರ್‌ ಚಂದನ್‌ ಗೋಪಾಲ್‌ ವರದಿ ಆಧರಿಸಿ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ. ಮಣಿಕಂಠ ಅವರನ್ನು ಬಳ್ಳಾರಿ ಡಿವೈಎಸ್‌ಪಿ ಕಚೇರಿಗೆ ಇದಕ್ಕೂ ಮುನ್ನ ವರ್ಗಾಯಿಸಲಾಗಿತ್ತು.

ಹಲ್ಲೆಗೊಳಗಾದ ರೈತನನ್ನು ಹೊನ್ನೂರಸ್ವಾಮಿ ಎಂದು ಗುರುತಿಸಲಾಗಿದೆ. ಈ ಹಲ್ಲೆ ವಿರೋಧಿಸಿ ಒಂದು ನಿರ್ದಿಷ್ಟ ಜಾತಿಗೆ ಸೇರಿದ ಜನ ಕುರುಗೋಡು ಪೊಲೀಸ್‌ ಠಾಣೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ಎಎಸ್‌ಪಿ ನಟರಾಜ್‌, ಪಿಎಸ್‌ಐ ವಿರುದ್ಧ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ADVERTISEMENT

ಇದರ ಹಿಂದೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರು ಪಿಎಸ್‌ಐ ಅಮಾನತು ಆದೇಶ ಹೊರಡಿಸಿದ್ದಾರೆ. ಘಟನೆ ಕುರಿತು ವಿಚಾರಣೆ ನಡೆಸಿ ವರದಿ ಕೊಡುವಂತೆ ತೋರಣಗಲ್ಲು ಡಿವೈಎಸ್‌ಪಿ ಎಸ್‌.ಎಸ್‌. ಕಾಶಿ ಅವರಿಗೆ ಸೂಚಿಸಿದ್ದಾರೆ.

ಮೂರನೇ ಸಲ ಹಲ್ಲೆ: ಕೋಳೂರು ಗ್ರಾಮದ ರೈತರ ಮೇಲೆ ಪಿಎಸ್‌ಐ ಎರಡು ವಾರದಲ್ಲಿ ಮೂರು ಸಲ ಹಲ್ಲೆ ನಡೆಸಿದ್ದಾರೆಂದು ಪ್ರತಿಭಟನಾಕಾರರು ದೂರಿದ್ದಾರೆ. ಜುಲೈ 30ರಂದು ಗ್ರಾಮದ ಏತ ನೀರಾವರಿ ತೊಟ್ಟಿಯಲ್ಲಿ ಮಹಿಳೆ ಶವ ಸಿಕ್ಕ ಸಮಯದಲ್ಲಿ ಮೊದಲ ಸಲ ಪಿಎಸ್‌ಐ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

9ರಂದು ಕಂಪ್ಲಿ ಮಾಜಿ ಶಾಸಕರ ಬ್ಯಾನರ್‌ ಹರಿದು ಹಾಕಿದ ದೂರಿನ ಮೇಲೆ ಈರಣ್ಣ ಹಾಗೂ ಹೊನ್ನೂರಸ್ವಾಮಿ ಅವರನ್ನು ಠಾಣೆಗೆ ಕರೆತಂದು ಕಿರುಕುಳ ನೀಡಿದ ಆರೋಪವೂ ಪಿಎಸ್‌ಐ ಮೇಲಿದೆ. ಬ್ಯಾನರ್‌ ಹರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಧರಣಿ ಕುಳಿತ ವೇಳೆ ನಡು ರಸ್ತೆಯಲ್ಲೇ ಈರಣ್ಣ ಮೇಲೆ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.

ಸೂ.... ಮಗನೆ ಯೂನಿಫಾರಂ ಬಿಚ್ಚಿ ಬರ್ತೇನೆ...

’ಸಬ್‌ ಇನ್‌ಸ್ಪೆಕ್ಟರ್‌ಗೆ ಒದ್ದಿದ್ದೇನೆ ಎಂದು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿದ್ಯಾ ಸೂ... ಮಗನೆ‘ ಎಂದು ಮಣಿಕಂಠ ಸಾರ್ವಜನಿಕರ ಮುಂದೆ ಹೊನ್ನೂರಸ್ವಾಮಿ ಅವರನ್ನು ಥಳಿಸುತ್ತಾರೆ.

’ನಾನು ಪೊಲೀಸ್‌ ಆಗಿ ಬಂದಿಲ್ಲಾ; ಯೂನಿಫಾರಂ ಬಿಚ್ಚಿಟ್ಟು ಬರ್ತೇನೆ ಬಾರ್ಲೆ ಸೂ... ಮಗನೆ‘ ಎಂದು ಕೂಗಾಡುತ್ತಾ, ಸಹೊದ್ಯೋಗಿಗಳು ತಡೆದರೂ ಸಬ್‌ ಇನ್‌ಸ್ಪೆಕ್ಟರ್‌ ರೈತನ ಮೈಮೇಲೆ ಏರಿ ಹೋಗುತ್ತಾರೆ. ’ನಾನಿರಬೇಕು ಇಲ್ಲ, ನೀನಿರಬೇಕು‘ ಎಂದು ಅರಚಾಡುತ್ತಾರೆ. ಮಗನ ಮೇಲೆ ಪಿಎಸ್‌ಐ ಹಲ್ಲೆ ನಡೆಸಿದ ಘಟನೆಯನ್ನು ಅಸಹಾಯಕ ತಾಯಿ ನಿಂತು ನೋಡುತ್ತಾರೆ.

ಕರ್ತವ್ಯಲೋಪ: ಎಸ್‌.ಪಿ

ಇದಕ್ಕೂ ಮೊದಲು ಗುರುವಾರ ಮಣಿಕಂಠ ಅವರನ್ನು ವರ್ಗಾವಣೆ ಮಾಡಿದ್ದ ಆದೇಶದಲ್ಲಿ ಎಸ್‌.ಪಿ ಸೈದುಲು ಅಡಾವತ್‌, ’ನೀವು ಕರ್ತವ್ಯದಲ್ಲಿ ಆಸಕ್ತಿ ತೋರುತ್ತಿಲ್ಲ. ಠಾಣೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದೀರಿ‘ ಎಂದು ಹೇಳಿದ್ದಾರೆ.

ತಕ್ಷಣಕ್ಕೆ ಪಿಎಸ್‌ಐ ರಘು ಅವರನ್ನು ಕುರುಗೋಡು ಠಾಣೆಗೆ ವರ್ಗ ಮಾಡಲಾಗಿದೆ. ಇದು ಪ್ರಭಾರಿ ಹೊಣೆ ಎಂದು ಅಡಾವತ್‌ ಆದೇಶದಲ್ಲಿ ತಿಳಿಸಿದ್ದಾರೆ.

’ಪ್ರಜಾವಾಣಿ‘ ಜತೆ ಮಾತನಾಡಿದ ಎಸ್‌.ಪಿ, ’ಮಾಜಿ ಶಾಸಕರೊಬ್ಬರ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ಹಾಕಿದ್ದ ಬ್ಯಾನರ್‌ನಲ್ಲಿ ಪಿಎಸ್‌ಐ ಫೋಟೋ ಇದ್ದುದ್ದನ್ನು ವಾಟ್ಸ್‌ಆ್ಯಪ್‌ನಲ್ಲಿ ನೋಡಿದ್ದೇನೆ‘ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.