ರಾಹುಲ್ ಗಾಂಧಿ
ನವದೆಹಲಿ: ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಡುವು ವಿಧಿಸಿದ್ದಾರೆ.
ಮತಕಳ್ಳತನದ ಕುರಿತು ಗುರುವಾರ ಇಲ್ಲಿ ಎರಡನೇ ಮಾಧ್ಯಮಗೋಷ್ಠಿ ನಡೆಸಿದ ರಾಹುಲ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಸಾಕ್ಷ್ಯಗಳನ್ನು ಒದಗಿಸುವಂತೆ ತನಿಖಾ ಸಂಸ್ಥೆಯು 18 ತಿಂಗಳಲ್ಲಿ 18 ಪತ್ರಗಳನ್ನು ಬರೆದರೂ ಆಯೋಗ ಸ್ಪಂದಿಸಿಲ್ಲ ಎಂದು ಅವರು ದೂರಿದರು. ಮತಕಳವಿನ ಕುರಿತು ಆಯೋಗದ ಕೆಲವರು ತಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಶಕ್ತಿಗಳ ಜತೆಗೆ ಜ್ಞಾನೇಶ್ ಕುಮಾರ್ ಕೈಜೋಡಿಸಿದ್ದಾರೆ. ಅವರು ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಮತಕಳ್ಳತನ ಮಾಡುವವರ ರಕ್ಷಣೆ ಮಾಡುವ ಕೆಲಸವನ್ನು ಕೂಡಲೇ ಕೈಬಿಡಬೇಕು’ ಎಂದೂ ಅವರು ಆಗ್ರಹಿಸಿದರು.
‘ಐಪಿ ಲಾಗ್‌ಗಳು, 6,108 ಮತದಾರರ ಹೆಸರನ್ನು ಅಳಿಸಲು ಅರ್ಜಿ ಸಲ್ಲಿಸಲು ಬಳಸಿದ ಮೊಬೈಲ್‌ಗಳ ಒಟಿಪಿ ಕುರಿತ ಮಾಹಿತಿಗಳನ್ನು ತನಿಖಾಧಿಕಾರಿ ಗಳೊಂದಿಗೆ ಹಂಚಿಕೊಳ್ಳಬೇಕು. ಇಲ್ಲದಿದ್ದರೆ, ಮತಕಳವು ಮಾಡುತ್ತಿರು ವವರನ್ನು ಕುಮಾರ್ ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಜನರಿಗೆ ಖಚಿತ ಪುರಾವೆ ಸಿಕ್ಕಂತಾಗುತ್ತದೆ’ ಎಂದು ಅವರು ಹೇಳಿದರು.
‘ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಆನ್‌ಲೈನ್ ಅರ್ಜಿಗಳನ್ನು ಸ್ವಯಂಚಾಲಿತವಾಗಿ ಸಲ್ಲಿಸುವ ಮೂಲಕ ಮತಗಳನ್ನು ಕದಿಯಲು ಯಾರೋ ಕೇಂದ್ರೀಕೃತ ವ್ಯವಸ್ಥೆ ರೂಪಿಸಿದ್ದಾರೆ’ ಎಂದು ರಾಹುಲ್ ಹೇಳಿದರು.
ಕ್ಷೇತ್ರದಲ್ಲಿರುವ ಮತದಾರರ ಗುರುತನ್ನು ಬಳಸಿಕೊಂಡು ಹೊರ ರಾಜ್ಯದ ಮೊಬೈಲ್‌ಗಳ ಸಹಕಾರದಿಂದ ಅರ್ಜಿ ಭರ್ತಿ ಮಾಡಿ ಈ ಕೃತ್ಯಗಳನ್ನು ಎಸಗಲಾಗಿದೆ. ಮಹಾರಾಷ್ಟ್ರದ ರಾಜೌರ ಕ್ಷೇತ್ರದ ಮತಕಳವಿಗೆ ಇದೇ ಮಾದರಿಯ ಕಾರ್ಯಾಚರಣೆ ನಡೆಸಲಾಗಿದೆ. ನಕಲಿ ಹೆಸರು ಹಾಗೂ ವಿಳಾಸಗಳ ಮೂಲಕ ಮತದಾರರ ಪಟ್ಟಿಗೆ 6,850 ನಕಲಿ ಮತದಾರರನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.
‘ಆಳಂದದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಚಿಕ್ಕಪ್ಪನ ಮತವನ್ನು ಅಳಿಸಲಾಗಿದೆ ಎಂದು ಗಮನಿಸಿದ ಬಳಿಕ ಈ ಹಗರಣ ಬಯಲಿಗೆ ಬಂದಿತ್ತು. ಆ ಮತವನ್ನು ಅಳಿಸಲು ಅರ್ಜಿ ಸಲ್ಲಿಸಿದವರು ನೆರೆಮನೆಯ ವ್ಯಕ್ತಿ (ಸೂರ್ಯಕಾಂತ್) ಎಂಬುದು ಆಕೆಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ನಾನು ಯಾವುದೇ ಅರ್ಜಿ ಸಲ್ಲಿಸಿಲ್ಲ ಹಾಗೂ ಯಾವುದೇ ಮಾಹಿತಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದರು. ಯಾರೋ ಎಲ್ಲೋ ಕೂತು ಈ ದುಷ್ಕೃತ್ಯಗಳನ್ನು ಎಸಗುತ್ತಿದ್ದರು’ ಎಂದು ರಾಹುಲ್ ವಿವರ ನೀಡಿದರು. ಸೂರ್ಯಕಾಂತ್ ಅವರು ಘಟನೆಯ ವಿವರಗಳನ್ನು ನೀಡಿದರು. ಆಳಂದ ಶಾಸಕ ಬಿ.ಆರ್.ಪಾಟೀಲ ಹಾಜರಿದ್ದರು.
ಅಸಹಕಾರದಿಂದ ಸಿಐಡಿ ತನಿಖೆ ಸ್ಥಗಿತ
ಮತಕಳವು ಯತ್ನದ ವಿರುದ್ಧ ದೂರು
2023ರ ಫೆಬ್ರುವರಿಯಲ್ಲಿ ಎಫ್‌ಐಆರ್ ದಾಖಲು
ಪ್ರಕರಣ ಸಿಐಡಿಗೆ ಹಸ್ತಾಂತರ
ಎಲ್ಲ ಮಾಹಿತಿ ಒದಗಿಸುವಂತೆ ಸಿಐಡಿಯಿಂದ ಚುನಾವಣಾ ಆಯೋಗಕ್ಕೆ 2023ರ ಮಾರ್ಚ್‌ನಲ್ಲಿ ಪತ್ರ
2023ರ ಆಗಸ್ಟ್‌ನಲ್ಲಿ ಭಾಗಶಃ ಮಾಹಿತಿ ಒದಗಿಸಿದ ಆಯೋಗ
ಸಮಗ್ರ ಮಾಹಿತಿ ಒದಗಿಸುವಂತೆ ಸಿಐಡಿಯಿಂದ ಆಯೋಗಕ್ಕೆ 2024ರ ಜನವರಿಯಲ್ಲಿ ಪತ್ರ
ಮಾಹಿತಿ ಒದಗಿಸುವಂತೆ ಕರ್ನಾಟಕ ಚುನಾವಣಾ ಆಯೋಗದಿಂದಲೂ ಕೇಂದ್ರ ಆಯೋಗಕ್ಕೆ ಹಲವು ಸಲ ಮನವಿ
ಹಲವು ಸಲ ಪತ್ರ ಬರೆದರೂ 2024ರ ಜನವರಿಯಿಂದ ಇಲ್ಲಿಯವರೆಗೆ ಯಾವುದೇ ಮಾಹಿತಿ ಒದಗಿಸದ ಆಯೋಗ
ಆಯೋಗದ ಅಸಹಕಾರದಿಂದ ತನಿಖೆ ಸ್ಥಗಿತ
36 ಸೆಕೆಂಡುಗಳಲ್ಲೇ ಎರಡು ಅರ್ಜಿ ಭರ್ತಿ: ರಾಹುಲ್
ಆಳಂದದಲ್ಲಿ ಕಾಂಗ್ರೆಸ್ ಮತದಾರರನ್ನೇ ಗುರಿಯಾಗಿಸಿಕೊಂಡು 6018 ಮತದಾರರನ್ನು ಮತದಾರರ ಪಟ್ಟಿಯಿಂದ ಹೊರದಬ್ಬಲು ಪ್ರಯತ್ನಿಸಿದ್ದರು
12 ಮತದಾರರ ಹೆಸರನ್ನು ಅಳಿಸಲು 63 ವರ್ಷದ ಗೋದಾಬಾಯಿ ಹೆಸರಿನಲ್ಲಿ ನಕಲಿ ಲಾಗಿನ್‌ಗಳನ್ನು ಸೃಷ್ಟಿಸಿದ್ದರು
12 ನೆರೆಹೊರೆಯವರ ಹೆಸರುಗಳನ್ನು ಅಳಿಸಲು ವಿವಿಧ ರಾಜ್ಯಗಳ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಲಾಗಿತ್ತು
ಸೂರ್ಯಕಾಂತ್ ಎಂಬವರ ಹೆಸರನ್ನು 14 ನಿಮಿಷಗಳಲ್ಲೇ 12 ಮತದಾರರ ಹೆಸರನ್ನು ಅಳಿಸಲು ಬಳಸಲಾಗಿತ್ತು. ಅವರಿಗೆ ಆ ವಿಷಯವೇ ಗೊತ್ತಿರಲಿಲ್ಲ
ಎರಡು ಅರ್ಜಿಗಳನ್ನು 36 ಸೆಕೆಂಡುಗಳಲ್ಲೇ ಭರ್ತಿ ಮಾಡಿ ಸಲ್ಲಿಸಲಾಗಿತ್ತು. ಅದು ಸಹ ಮುಂಜಾನೆ 4.07ರಿಂದ 4.08ರ ನಡುವೆ. ಇದನ್ನು ಸಾಮಾನ್ಯ ಮನುಷ್ಯರಿಂದ ಮಾಡಲು ಸಾಧ್ಯವಿಲ್ಲ
ಮತಗಟ್ಟೆಯ ಮೊದಲ ಮತದಾರರನ್ನೇ ಗುರಿಯಾಗಿಸಿಕೊಂಡು ಈ ಅಪರಾಧ ಎಸಗಲಾಗುತ್ತಿದೆ
ಆಳಂದದಲ್ಲಿ ಕಾಂಗ್ರೆಸ್ ಪ್ರಬಲವಾಗಿರುವ ಮತಗಟ್ಟೆಗಳಲ್ಲೇ ಮತಕಳವಿಗೆ ಯತ್ನ ನಡೆದಿತ್ತು. ಕಾಂಗ್ರೆಸ್ ಭದ್ರಕೋಟೆ ಆಗಿರುವ 10 ಮತಗಟ್ಟೆಗಳಲ್ಲಿಯೇ ಗರಿಷ್ಠ ಸಂಖ್ಯೆಯ ಮತದಾರರ ಹೆಸರನ್ನು ಕಿತ್ತು ಹಾಕುವ ಪ್ರಯತ್ನ ಆಗಿತ್ತು
2018ರಲ್ಲಿ 10 ಬೂತ್‌ಗಳಲ್ಲಿ 8ರಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. ಇದು ಆಕಸ್ಮಿಕ ಅಲ್ಲ. ಇದೊಂದು ಯೋಜಿತ ಕಾರ್ಯಾಚರಣೆ
ಶೇ 100 ಪುರಾವೆ ಇಲ್ಲದೆ ಆರೋಪ ಮಾಡಲ್ಲ: ರಾಹುಲ್
‘ನಾನು ವಿಪಕ್ಷ ನಾಯಕ. ಶೇ 100ರಷ್ಟು ಪುರಾವೆಗಳು ಇಲ್ಲದೇ ಯಾವುದೇ ಆರೋಪ ಮಾಡುವುದಿಲ್ಲ. ನಾನು ನನ್ನ ದೇಶವನ್ನು ಪ್ರೀತಿಸುವ ವ್ಯಕ್ತಿ. ನಾನು ಸಂವಿಧಾನ ಪ್ರೀತಿಸುತ್ತೇನೆ, ನಾನು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುತ್ತೇನೆ ಮತ್ತು ಆ ಪ್ರಕ್ರಿಯೆಯನ್ನು ರಕ್ಷಿಸುತ್ತಿದ್ದೇನೆ’ ಎಂದು ರಾಹುಲ್ ಹೇಳಿದರು.
‘ಚುನಾವಣಾ ವ್ಯವಸ್ಥೆಯಲ್ಲಿನ ಅಕ್ರಮದ ಬಗ್ಗೆ ಬೆಳಕು ಚೆಲ್ಲಲು ನಾನು ಅಡಿಪಾಯ ಹಾಕುತ್ತಿದ್ದೇನೆ. ಇದು 10-15 ವರ್ಷಗಳಿಂದ ನಡೆಯುತ್ತಿದೆ. ಭಾರತದ ಪ್ರಜಾಪ್ರಭುತ್ವವನ್ನು ಅಪಹರಿಸಲಾಗಿದೆ. ಪ್ರಜಾಪ್ರಭುತ್ವವನ್ನು ಭಾರತದ ಜನರು ಮಾತ್ರ ಉಳಿಸಬಹುದು. ರಾಹುಲ್ ಗಾಂಧಿ ಸತ್ಯವನ್ನು ತೋರಿಸಬಹುದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕದಿಯಲಾಗಿದೆ ಎಂದು ಜನರು ಅರಿತುಕೊಂಡ ದಿನ ನನ್ನ ಕೆಲಸ ಮುಗಿಯುತ್ತದೆ’ ಎಂದು ರಾಹುಲ್ ಹೇಳಿದರು.
ಮತಕಳವಿನ ವಿರುದ್ಧ ಪಕ್ಷವು ನ್ಯಾಯಾಲಯದ ಮೊರೆ ಹೋಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ಇಲ್ಲಿ ಮಾಡುತ್ತಿರುವುದು ನನ್ನ ಕೆಲಸವಲ್ಲ. ನನ್ನ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವುದು. ನನ್ನ ಕೆಲಸ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವುದು ಅಲ್ಲ. ಅದು ಭಾರತದಲ್ಲಿನ ಸಾಂವಿಧಾನಿಕ ಸಂಸ್ಥೆಗಳ ಕೆಲಸ. ಆದರೆ, ಅವರು ಆ ಕೆಲಸ ಮಾಡುತ್ತಿಲ್ಲ. ಹಾಗಾಗಿ, ನಾನು ಆ ಕೆಲಸ ಮಾಡುತ್ತಿದ್ದೇನೆ’ ಎಂದರು.
ಆರೋಪ ಆಧಾರರಹಿತ: ಆಯೋಗ
ಆಳಂದ ಕ್ಷೇತ್ರದ ಮತಕಳವು ಕುರಿತು ರಾಹುಲ್ ಹೇಳಿಕೆಯನ್ನು ಆಯೋಗ ತಳ್ಳಿ ಹಾಕಿದೆ. ಈ ಆರೋಪ ತಪ್ಪು ಹಾಗೂ ಆಧಾರರಹಿತ ಎಂದು ಹೇಳಿದೆ.
ರಾಹುಲ್ ಗಾಂಧಿ ತಪ್ಪಾಗಿ ಭಾವಿಸಿದಂತೆ ಯಾವುದೇ ಸಾರ್ವಜನಿಕರು ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ.
‘2023 ರಲ್ಲಿ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳು ನಡೆದವು. ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳೇ ದೂರು ದಾಖಲಿಸಿದ್ದರು’ ಎಂದು ಆಯೋಗ ಸ್ಪಷ್ಟಪಡಿಸಿದೆ.
ಈ ಕ್ಷೇತ್ರದಲ್ಲಿ 2018ರಲ್ಲಿ ಸುಭಾಷ್ ಗುತ್ತೇದಾರ್ (ಬಿಜೆಪಿ) ಮತ್ತು 2023 ರಲ್ಲಿ ಬಿ.ಆರ್. ಪಾಟೀಲ (ಕಾಂಗ್ರೆಸ್) ಗೆದ್ದಿದ್ದಾರೆ ಎಂದು ಆಯೋಗ ತಿಳಿಸಿದೆ. ಸಿಐಡಿಗೆ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂಬ ಆರೋಪದ ಬಗ್ಗೆ ಆಯೋಗ ಪ್ರತಿಕ್ರಿಯಿಸಿಲ್ಲ.
ಮತಕಳವಿನ ಬಗ್ಗೆ ಈಗ ಒದಗಿಸಿರುವ ಮಾಹಿತಿಗಳು ನಾನು ಹೇಳಿರುವ ಹೈಡ್ರೋಜನ್ ಬಾಂಬ್‌ನ ಭಾಗ ಅಲ್ಲ. ಅದು ಶೀಘ್ರದಲ್ಲಿ ಬರಲಿದೆ. ಮತ ಕಳವಿನ ಕುರಿತ ಸಮಗ್ರ ಸಂಶೋಧನೆ, ಪ್ರಸ್ತುತಿಗೆ 2–3 ತಿಂಗಳು ಬೇಕಾಗಬಹುದು.– ರಾಹುಲ್ ಗಾಂಧಿ, ವಿಪಕ್ಷ ನಾಯಕ
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಮತದಾರರ ಹೆಸರನ್ನು ಅಳಿಸಲು ಯತ್ನಿಸಲಾಗಿತ್ತು.– ಬಿ.ಆರ್.ಪಾಟೀಲ, ಆಳಂದ ಶಾಸಕ
ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳ ಮೀಸಲಾತಿಯನ್ನು ಬಿಜೆಪಿ ತೆಗೆದು ಹಾಕಲಿದೆ ಎಂಬುದಾಗಿ ರಾಹುಲ್ ಗಾಂಧಿ ಈ ಹಿಂದೆ ಆರೋಪಿಸಿದ್ದರು. ಈಗ, ಮತ ಕಳವು ಎಂಬ ‘ಸುಳ್ಳು ಸಂಕಥನ’ ತಂತ್ರದ ಮೊರೆಹೋಗಿದ್ದಾರೆ.– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.