ADVERTISEMENT

ಜಿಲ್ಲೆಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ

ಹೊಸಪೇಟೆ ರೈಲು ನಿಲ್ದಾಣ ಆಧುನೀಕರಣಕ್ಕೆ ₹4.5 ಕೋಟಿ; ಹಂಪಿಯಲ್ಲಿ ಸೌಕರ್ಯಕ್ಕೆ ಸಿಗದ ಬಿಡಿಗಾಸು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಫೆಬ್ರುವರಿ 2019, 20:14 IST
Last Updated 1 ಫೆಬ್ರುವರಿ 2019, 20:14 IST
ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ₹4.5 ಕೋಟಿ ಅನುದಾನ ನೀಡಿದೆ
ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ₹4.5 ಕೋಟಿ ಅನುದಾನ ನೀಡಿದೆ   

ಹೊಸಪೇಟೆ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಜಿಲ್ಲೆಯ ಪಾಲಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ತಂದಿದೆ.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲ ರೈಲ್ವೆ ಯೋಜನೆಗಳಿಗೆ ಸ್ವಲ್ಪ ಅನುದಾನ ಸಿಕ್ಕಿದೆ. ಇದೇ ವೇಳೆ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿಲ್ಲ.

‘ಉಕ್ಕಿನ ರಾಜಧಾನಿ’ ಆಗಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ಹೊಸ ಉದ್ಯಮ, ಕೌಶಲ ಕೇಂದ್ರ ಸ್ಥಾಪಿಸುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ.

ADVERTISEMENT

ನಗರದಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಅನಂತಶಯನಗುಡಿ ಎಲ್‌.ಸಿ. ಗೇಟ್‌ ಸಂಖ್ಯೆ 85ರ ಬಳಿ ಮೇಲ್ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಸರ್ಕಾರ ಈಗ ಕಿವಿಗೊಟ್ಟಿದೆ. ಅಷ್ಟೇ ಅಲ್ಲ, ಅದಕ್ಕಾಗಿ ಬಜೆಟ್‌ನಲ್ಲಿ ಒಟ್ಟು ₹20 ಕೋಟಿ ತೆಗೆದಿರಿಸಿದೆ. ಮೊದಲ ಹಂತದಲ್ಲಿ ₹3 ಕೋಟಿ ಬಿಡುಗಡೆ ಮಾಡುವ ವಾಗ್ದಾನ ನೀಡಿದೆ.

ಅದೇ ರೀತಿ ನಗರ ರೈಲು ನಿಲ್ದಾಣದ ಆಧುನೀಕರಣಕ್ಕೆ ಒತ್ತು ನೀಡಲಾಗಿದ್ದು, ಅದಕ್ಕಾಗಿ ₹4.5 ಕೋಟಿ ಹಣ ಒದಗಿಸಿದೆ. ಸರ್ಕಾರದ ಈ ನಿರ್ಧಾರವನ್ನು ವಿಜಯನಗರ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ. ಯಮುನೇಶ್‌ ಸ್ವಾಗತಿಸಿದ್ದಾರೆ.

‘ನಗರದಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿರುವ ಅನಂತಶಯನಗುಡಿ ರೈಲ್ವೆ ಗೇಟ್‌ನಿಂದ ನಿತ್ಯ ಪ್ರವಾಸಿಗರು, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಮೇಲ್ಸೇತುವೆಗೆ ಒತ್ತಾಯಿಸಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅದಕ್ಕೆ ಈಗ ಫಲ ಸಿಕ್ಕಿದೆ. ತಡವಾಗಿಯಾದರೂ ಸರ್ಕಾರ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ’ ಎಂದು ಯಮುನೇಶ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ನಿತ್ಯ ದೇಶ–ವಿದೇಶಗಳಿಂದ ಪ್ರವಾಸಿಗರು ನಗರದ ರೈಲು ನಿಲ್ದಾಣಕ್ಕೆ ಬಂದು ಹಂಪಿಗೆ ಹೋಗುತ್ತಾರೆ. ಆದರೆ, ನಿಲ್ದಾಣದಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ. ಈಗ ಆಧುನೀಕರಣಕ್ಕೆ ಮುಂದಾಗಿರುವುದು ಒಳ್ಳೆಯ ಸಂಗತಿ.ರಾಯದುರ್ಗ–ತುಮಕೂರು ಮಾರ್ಗಕ್ಕೆ ₹50 ಕೋಟಿ ಅನುದಾನ ನೀಡಿದೆ. ಈ ಮಾರ್ಗ ಬೇಗ ಪೂರ್ಣಗೊಂಡರೆ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಪ್ರವಾಸೋದ್ಯಮ, ಉಕ್ಕು ಉತ್ಪಾದನಾ ಕ್ಷೇತ್ರದಲ್ಲಿ ಜಿಲ್ಲೆಗೆ ನಿರಾಸೆ ಉಂಟಾಗಿದೆ. ‘ಉಕ್ಕು ಉತ್ಪಾದನಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ಅವಕಾಶಗಳಿದ್ದವು. ಆದರೆ, ಸರ್ಕಾರ ಕೈಚೆಲ್ಲಿದೆ.ಯುವಕರಿಗಾಗಿ, ಗಣಿ ಮತ್ತು ಉಕ್ಕು ತಯಾರಿಕೆ ಕೌಶಲ ಶಿಕ್ಷಣ ನೀಡಲು ಉನ್ನತ ಕೇಂದ್ರದ ಸ್ಥಾಪನೆಯ ನಿರೀಕ್ಷೆ ಕೂಡ ಹುಸಿಯಾಗಿದೆ’ ಎಂದು ಪರಿಸರ ಹೋರಾಟಗಾರ ಶಿವಕುಮಾರ ಮಾಳಗಿ ತಿಳಿಸಿದರು.

‘2018ರ ಬಜೆಟ್‌ನಲ್ಲಿ, ಹಂಪಿಯನ್ನು ದೇಶದ ಹತ್ತು ಪ್ರಮುಖ ಸಾಂಪ್ರದಾಯಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಲಾಗಿತ್ತು. ‘ರಾಮಾಯಣ ಸರ್ಕ್ಯೂಟ್‌’ಗೂ ಸೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಅದಕ್ಕಾಗಿ ಬಜೆಟ್‌ನಲ್ಲಿ ನಯಾ ಪೈಸೆಯೂ ಕೊಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಂಪಿಗೆ ಪ್ರತಿ ವರ್ಷ ದೇಶ–ವಿದೇಶಗಳಿಂದ ಸರಿಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ಕೊಡುತ್ತಾರೆ. ಹೀಗಿರುವಾಗ ಮೂಲಭೂತ ಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಅದನ್ನು ಕಡೆಗಣಿಸಲಾಗಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.