ADVERTISEMENT

ತುಮಕೂರು | ಸಚಿವ ಪರಮೇಶ್ವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ED ದಾಳಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 19:24 IST
Last Updated 21 ಮೇ 2025, 19:24 IST
<div class="paragraphs"><p>ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆ</p></div>

ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆ

   

ಬೆಂಗಳೂರು/ತುಮಕೂರು: ಚಿತ್ರನಟಿ ರನ್ಯಾ ರಾವ್‌ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಮುಖ್ಯಸ್ಥರಾಗಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.

‘ರನ್ಯಾ ರಾವ್‌ ಜೊತೆ ಹಣಕಾಸು ವಹಿವಾಟು ನಡೆಸಿದ್ದ ಖಾಸಗಿ ಭದ್ರತಾ ಏಜೆನ್ಸಿಯೊಂದರ ಜೊತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯೂ ನಂಟು ಹೊಂದಿದೆ. ಶಿಕ್ಷಣ ಸಂಸ್ಥೆಯು ಕಂಪನಿಯೊಂದಕ್ಕೆ ₹40 ಲಕ್ಷ ವರ್ಗಾವಣೆ ಮಾಡಿದೆ. ಅದೇ ದಿನ ಆ ಕಂಪನಿಯು ರನ್ಯಾ ರಾವ್ ಅವರ ಕ್ರೆಡಿಟ್‌ ಕಾರ್ಡ್‌ ಬಿಲ್‌ ಮೊತ್ತ ₹40 ಲಕ್ಷ ಪಾವತಿಸಿದೆ. ಆ ಕ್ರೆಡಿಟ್‌ ಕಾರ್ಡ್‌ನಿಂದಲೇ ರನ್ಯಾ ಏರ್‌ ಟಿಕೆಟ್‌ಗಳನ್ನು ಖರೀದಿಸಿದ್ದರು ಎಂಬುದು ಈಗ ಪತ್ತೆಯಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ADVERTISEMENT

ತುಮಕೂರಿನ ಮರಳೂರು ದಿಣ್ಣೆಯ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ತುಮಕೂರು ಹೊರ ವಲಯದ ಸಿದ್ಧಾರ್ಥ ನಗರದಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸೊಸೈಟಿ ಮತ್ತು ನೆಲಮಂಗಲ ಸಮೀಪದ ಟಿ.ಬೇಗೂರಿನ ಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕಚೇರಿ ಮೇಲೆ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳು ದಾಳಿ ನಡೆಸಿದವು. ತಡರಾತ್ರಿಯೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.

ಪರಮೇಶ್ವರ ಅವರು ಸಿದ್ಧಾರ್ಥ ಎಜುಕೇಷನ್‌ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು, ಅದರ ಅಧೀನದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿಯೂ ಆಗಿದ್ದಾರೆ. ಅವರ ಪತ್ನಿ ಕನ್ನಿಕಾ ಪರಮೇಶ್ವರ ಮತ್ತು ಅಣ್ಣನ ಮಗ ಜಿ.ಎಸ್‌. ಆನಂದ್‌ ಅವರು ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ತುಮಕೂರು ಹೊರ ವಲಯದಲ್ಲಿರುವ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಇತ್ತೀಚೆಗೆ ಖರೀದಿಸಿತ್ತು.

ಬುಧವಾರ ಬೆಳಿಗ್ಗೆಯೇ ನಾಲ್ಕೂ ಸ್ಥಳಗಳಲ್ಲಿ ಶೋಧ ಆರಂಭಿಸಿದ ಇ.ಡಿ ಅಧಿಕಾರಿಗಳು, ಪ್ರವೇಶ ದ್ವಾರಗಳನ್ನು ಬಂದ್ ಮಾಡಿದರು. ಹಲವು ವರ್ಷಗಳಿಂದ ಸಿದ್ದಾರ್ಥ ಎಜುಕೇಷನ್‌ ಸೊಸೈಟಿಯಲ್ಲಿ ನಡೆದಿರುವ ವಹಿವಾಟುಗಳು, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಪ್ರವೇಶಾತಿ, ಶುಲ್ಕ ಸಂಗ್ರಹ, ಸಂಸ್ಥೆಯು ನಡೆಸಿರುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಹರ್ಷವರ್ಧಿನಿ ರಾವ್‌ (ರನ್ಯಾ ರಾವ್‌) ಅವರನ್ನು ರೆವೆನ್ಯೂ ಗುಪ್ತಚರ ನಿರ್ದೇಶನಾಲಯ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾರ್ಚ್‌ 3ರಂದು ಬಂಧಿಸಿದ್ದರು.

ಪ್ರಕರಣದಲ್ಲಿ ತರುಣ್‌ ಕೊಂಡೂರು ಮತ್ತು ಸಾಹಿಲ್‌ ಜೈನ್‌ ಎಂಬವರನ್ನೂ ನಂತರ ಬಂಧಿಸಲಾಗಿತ್ತು.

2019ರಲ್ಲಿ ಐ.ಟಿ ಶೋಧ
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸೊಸೈಟಿ ಅಧೀನದ ಸಂಸ್ಥೆಗಳ ಮೇಲೆ 2019ರ ಅಕ್ಟೋಬರ್‌ 10ರಂದು ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದರು. ಆಗ ದೊಡ್ಡ ಮೊತ್ತದ ನಗದು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧವೂ ಇ.ಡಿ ತನಿಖೆ ಆರಂಭಿಸಿತ್ತು.
ಕೇಂದ್ರ ಸರ್ಕಾರವು ದೇಶದಾದ್ಯಂತ ವಿರೋಧ ಪಕ್ಷಗಳ ದಲಿತ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪರಮೇಶ್ವರ ಅವರು ಒಬ್ಬ ದಲಿತ ನಾಯಕ. ಅವರ ವಿರುದ್ಧ ಕೇಂದ್ರವು ಇ.ಡಿಯನ್ನು ಬಳಸಿಕೊಳ್ಳುತ್ತಿದೆ. ಸತ್ಯವೇ ಇಲ್ಲದ ಆರೋಪಗಳಲ್ಲಿ ತನಿಖೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಪರಮೇಶ್ವರ ಅವರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯೇ ಇಲ್ಲ. ಅವರು ಬಹಳ ಸರಳ ಮತ್ತು ನೇರ ವ್ಯಕ್ತಿತ್ವದ ಮನುಷ್ಯ. ಶೈಕ್ಷಣಿಕ ಸಂಸ್ಥೆಗಳಲ್ಲಿ ಏನು ಸಿಗುತ್ತದೆ ಎಂದು ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೋ ನನಗೆ ಗೊತ್ತಿಲ್ಲ
– ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಕೋಳಿ ಫಾರ್ಮ್‌ ಕಚೇರಿ ಮೇಲೂ ದಾಳಿ
ಕೊಪ್ಪಳ ಜಿಲ್ಲೆಯ ಕುದರಿಮೋತಿ ಸಮೀಪದಲ್ಲಿರುವ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಉತ್ಪಾದನಾ ಕಂಪನಿಯೊಂದರ ಕಚೇರಿಯಲ್ಲಿಯೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಮೊಟ್ಟೆ ಉತ್ಪಾದಿಸುವ ಕಂಪನಿಗಳಲ್ಲಿ ಇದು ಕೂಡ ಒಂದಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ರನ್ಯಾ ರಾವ್‌ ಅವರ ಮಲತಂದೆ, ಐಪಿಎಸ್‌ ಅಧಿಕಾರಿ ಆರ್‌. ರಾಮಚಂದ್ರರಾವ್‌ ಅವರ ಆಪ್ತರು ಈ ಕಂಪನಿಯ ಮಾಲೀಕರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.