ADVERTISEMENT

ಪಡಿತರ: ಒಟಿ‍ಪಿ ಸೌಲಭ್ಯ ಬಂದ್‌; ಕಾಳಸಂತೆಯಲ್ಲಿ ಆಹಾರ ಪದಾರ್ಥ ಮಾರಾಟ ತಡೆಗೆ ಕ್ರಮ

ಚಂದ್ರಹಾಸ ಹಿರೇಮಳಲಿ
Published 31 ಡಿಸೆಂಬರ್ 2024, 23:30 IST
Last Updated 31 ಡಿಸೆಂಬರ್ 2024, 23:30 IST
<div class="paragraphs"><p>&nbsp;ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)</p></div>

 ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮೊಬೈಲ್‌ ಬಳಕೆ ಜನಪ್ರಿಯವಾದ ನಂತರ ಪಡಿತರ ವಿತರಣೆಯಲ್ಲಿ ಉಪಯೋಗಿಸುತ್ತಿದ್ದ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಸೌಲಭ್ಯ ಸಂಪೂರ್ಣ ಸ್ಥಗಿತವಾಗಲಿದೆ. ನ್ಯಾಯಬೆಲೆ ಅಂಗಡಿಗಳೂ ಸೇರಿದಂತೆ ರಾಜ್ಯದ ಪಡಿತರ ವಿತರಣಾ ಕೇಂದ್ರಗಳಲ್ಲಿ ಒಟಿಪಿ ಸೌಲಭ್ಯ ಬಳಸಿಕೊಂಡು ಪಡಿತರ ಪಡೆಯಲು ಇನ್ನು ಮುಂದೆ ಅವಕಾಶ ಇಲ್ಲ.

ಪ್ರತಿ ತಿಂಗಳು ಗ್ರಾಹಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಬಯೋಮೆಟ್ರಿಕ್‌ ನೀಡಿ ಪಡಿತರ ಪಡೆಯುತ್ತಿದ್ದಾರೆ. ಪಡಿತರ ಪಡೆಯಲು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದೇ ಇರುವವರು ಆಧಾರ್‌ಗೆ ಜೋಡಣೆ ಮಾಡಲಾಗಿದ್ದ ತಮ್ಮ ಮೊಬೈಲ್‌ ನಂಬರ್‌ಗೆ ಬರುತ್ತಿದ್ದ ಒಟಿಪಿ ನೀಡಿ, ಕುಟುಂಬದ ಸದಸ್ಯರು ಅಥವಾ ತಾವು ಸೂಚಿಸಿದವರ ಬಳಿ ಪಡಿತರ ಪದಾರ್ಥಗಳನ್ನು ತರಿಸಿಕೊಳ್ಳಬಹುದಿತ್ತು. ಹಲವು ದಶಕಗಳಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿತ್ತು.

ADVERTISEMENT

ಉಚಿತವಾಗಿ ವಿತರಿಸುವ ಪಡಿತರ ಪದಾರ್ಥಗಳನ್ನು ಗ್ರಾಹಕರ ಹೆಸರಲ್ಲಿ ಮಧ್ಯವರ್ತಿಗಳು ಸಂಗ್ರಹಿಸುವುದನ್ನು ತಡೆಯಲು, ಅರ್ಹ ಫಲಾನುಭವಿಗಳಿಗೇ ದೊರೆಯುವಂತೆ ಮಾಡಲು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಹಲವು ಸುಧಾರಣಾ ಕ್ರಮಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿತ್ತು. ಅದರ ಬೆನ್ನಲ್ಲೇ, ಒಟಿಪಿ ಸೌಲಭ್ಯಕ್ಕೂ ಕಡಿವಾಣ ಹಾಕಿದೆ.

ಹಲವು ಪಡಿತರದಾರರು ಕೂಲಿ ಮತ್ತಿತರ ಕೆಲಸಗಳಿಗೆ ದೂರದ ಊರುಗಳಿಗೆ ತೆರಳಿದಾಗ, ತಮ್ಮ ಸಂಬಂಧಿಕರು, ಪರಿಚಯಸ್ಥರು, ನೆರೆಹೊರೆಯವರನ್ನು ಪಡಿತರ ವಿತರಣಾ ಕೇಂದ್ರಗಳಿಗೆ ಕಳುಹಿಸಿ, ಒಟಿಪಿ ನೀಡಿ ಪಡಿತರ ಪದಾರ್ಥಗಳನ್ನು ತರಿಸಿಕೊಳ್ಳುತ್ತಿದ್ದರು. ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದ ಮಧ್ಯವರ್ತಿಗಳು ಆಯಾ ತಿಂಗಳು ಪಡಿತರ ಪಡೆಯದವರ ಮಾಹಿತಿ ಸಂಗ್ರಹಿಸಿ, ಅವರಿಗೆ ಸ್ವಲ್ಪ ಹಣ ನೀಡುವ ಆಮಿಷವೊಡ್ಡಿ, ಅವರಿಂದ ಒಟಿಪಿ ಪಡೆದು ಪಡಿತರ ಪಡೆಯುತ್ತಿದ್ದರು. ಹೀಗೆ ಸಂಗ್ರಹಿಸಿದ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಇಂತಹ ದೊಡ್ಡ ಜಾಲಗಳು ಸಕ್ರಿಯವಾಗಿರುವುದನ್ನು ಇಲಾಖೆ ಅಧಿಕಾರಿಗಳು ಅಕ್ಕಿಗಿರಣಿಗಳು, ಸಗಟು ಮಾರಾಟ ಕೇಂದ್ರಗಳ ಮೇಲೆ ನಡೆಸಿದ ದಾಳಿಗಳಲ್ಲಿ ಪತ್ತೆ ಮಾಡಿದ್ದರು. 

ವೃದ್ಧರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ತೊಂದರೆ: ‘ಸರ್ಕಾರ 70 ವರ್ಷ ದಾಟಿದವರ ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆ ರೂಪಿಸಿದೆ. ಅಂಥವರ ಮನೆ ಬಾಗಿಲಿಗೆ ಬಯೋಮೆಟ್ರಿಕ್‌ ಅಥವಾ ಐರಿಸ್‌ ಯಂತ್ರ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಬಹುತೇಕ ಹಳ್ಳಿಗಳಲ್ಲಿ ಮಕ್ಕಳು ದುಡಿಯಲು ಪಟ್ಟಣಗಳಿಗೆ ತೆರಳಿರುತ್ತಾರೆ. ಅಂತಹ ಕುಟುಂಬಗಳ ಯಜಮಾನರು ಆರೋಗ್ಯ ಸಮಸ್ಯೆಗೆ ತುತ್ತಾದಾಗ ನೆರೆಹೊರೆಯವರ ಬಳಿ ಪಡಿತರ ತರಿಸಿಕೊಳ್ಳುತ್ತಾರೆ. ಒಟಿಪಿ ಸೌಲಭ್ಯ ಬಳಸಿಕೊಂಡು ಅಂಥವರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಪಡಿತರ ಅಕ್ರಮ ಮಾರಾಟ ತಡೆಗೆ ಅಧಿಕಾರಿಗಳು ಪರ್ಯಾಯ ಮಾರ್ಗ ಹುಡುಕಬೇಕು. ಸೌಲಭ್ಯಕ್ಕೆ ಕತ್ತರಿ ಹಾಕಬಾರದು’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ.

‘ಐರಿಸ್‌’ ಯಂತ್ರ; ಶೇ 20 ದಾಟದ ಪ್ರಗತಿ

ಗ್ರಾಮೀಣ ಪ್ರದೇಶದಲ್ಲಿನ ಸರ್ವರ್‌ ಸಮಸ್ಯೆ, ಬೆರಳಚ್ಚುಗಳ ಪುನರಾವರ್ತನೆ, ಆಧಾರ್‌ಗೆ ಜೋಡಿಸಿದ್ದ ತಪ್ಪು ಮೊಬೈಲ್‌ ಸಂಖ್ಯೆಗಳಿಂದಾಗಿ ಒಟಿಪಿ ಪಡೆಯಲು ಪರದಾಟ ಮತ್ತಿತರ ಕಾರಣಗಳಿಂದ ನೈಜ ಫಲಾನುಭವಿಗಳಿಗೆ ಪಡಿತರ ನೀಡಲು ಹಲವು ತೊಡಕುಗಳಿದ್ದವು.

ಕಳೆದ ವರ್ಷ ಒಟಿಪಿ ದೊರೆಯದೇ ರಾಜ್ಯದಲ್ಲಿ ಪ್ರತಿ ತಿಂಗಳು 25 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಇತ್ತು. ಅದಕ್ಕಾಗಿ ಇದೇ ಏಪ್ರಿಲ್‌ನಿಂದ ಅತ್ಯಾಧುನಿಕ ಐರಿಸ್‌ ಸ್ಕ್ಯಾನ್‌ ಸಾಧನಗಳ ಅಳವಡಿಕೆ ಕಡ್ಡಾಯಗೊಳಿಸಲಾಗಿತ್ತು. ಆದರೆ, ಇದುವರೆಗೂ ಸಾಧನ ಅಳವಡಿಸಿಕೊಂಡ ಪಡಿತರ ವಿತರಣಾ ಕೇಂದ್ರಗಳ ಸಂಖ್ಯೆ ಶೇ 20ರಷ್ಟು ದಾಟಿಲ್ಲ.

ಒಟಿಪಿ ಸೌಲಭ್ಯ ಉಳಿಸಿಕೊಳ್ಳುವಂತೆ ಆಹಾರ ಸಚಿವರಿಗೆ ಮನವಿ ಮಾಡಿದ್ದೇವೆ. ಸೌಲಭ್ಯ ಸ್ಥಗಿತದಿಂದ ಮನೆ ಬಾಗಿಲಿಗೆ ಪಡಿತರ ಯೋಜನೆಗೆ ತೊಡಕಾಗುತ್ತದೆ.
-ಟಿ.ಕೃಷ್ಣಪ್ಪ, ಅಧ್ಯಕ್ಷ, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.