ADVERTISEMENT

ಪಡಿತರ ಅಕ್ರಮ: 90 ಸಾವಿರ ಕ್ವಿಂಟಲ್‌ ಆಹಾರಧಾನ್ಯ ವಶ, ಮಂಡ್ಯ, ಕೋಲಾರದಲ್ಲೇ ಹೆಚ್ಚು

ಕೆ.ಓಂಕಾರ ಮೂರ್ತಿ
Published 27 ಜೂನ್ 2022, 4:38 IST
Last Updated 27 ಜೂನ್ 2022, 4:38 IST
ಅಕ್ಕಿ ಚೀಲಗಳ ಅಕ್ರಮ ದಾಸ್ತಾನು
ಅಕ್ಕಿ ಚೀಲಗಳ ಅಕ್ರಮ ದಾಸ್ತಾನು   

ಕೋಲಾರ: ‘ಅನ್ನಭಾಗ್ಯ’ ಯೋಜನೆಯಲ್ಲಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, 14 ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ90 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

ಅಕ್ಕಿ ಗಿರಣಿ, ಗೋದಾಮು, ಮನೆ, ಬಂಕರ್‌, ಲಾರಿಗಳ ಮೇಲೆ ದಾಳಿ ನಡೆಸಿ, ಅಗತ್ಯ ವಸ್ತುಗಳ ಸರಕು ಕಾಯ್ದೆಯಡಿ 2021ರ ಏಪ್ರಿಲ್‌ನಿಂದ ಈ ವರ್ಷದ ಮೇ 15ರವರೆಗೆ 779 ಪ್ರಕರಣ ದಾಖಲಿಸಲಾಗಿದೆ.

ಮಂಡ್ಯ (24,406 ಕ್ವಿಂಟಲ್‌) ಹಾಗೂ ಕೋಲಾರ (11,466 ಕ್ವಿಂಟಲ್‌) ಜಿಲ್ಲೆಯಲ್ಲೇ ಹೆಚ್ಚು ಪಡಿತರ ಅಕ್ರಮವಾಗಿ ದಾಸ್ತಾನು, ಸಾಗಣೆಮಾಡಿರುವುದನ್ನು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ. ಬಾಗಲಕೋಟೆ (45) ಹಾಗೂ ಬಳ್ಳಾರಿ (44) ಅತ್ಯಧಿಕ ಪ್ರಕರಣ ದಾಖಲಾಗಿವೆ.

ADVERTISEMENT

ಅಕ್ರಮವೆಸಗಿದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಸಿ ದಾಳಿ ನಡೆಸಿದರೂ ಅವ್ಯಾಹತವಾಗಿ ನಡೆಯುತ್ತಿದೆ.

‘ಪಡಿತರ ಆಹಾರಧಾನ್ಯ ಅಕ್ರಮ ದಾಸ್ತಾನು ಬಗ್ಗೆ ವಿವಿಧೆಡೆಯಿಂದ ದೂರು ಬರುತ್ತಿವೆ. ಅಕ್ಕಿಗಿರಣಿ, ಗೋದಾಮು, ಅಂಗಡಿಗಳ ಮೇಲೆ ದಾಳಿ ನಡೆಸಿ ಆಹಾರಧಾನ್ಯ ವಶಕ್ಕೆ ಪಡೆಯಲಾಗುತ್ತಿದೆ’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ (ಐ.ಟಿ) ಗ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ತಿಳಿಸಿದರು.

‘1 ಕೆ.ಜಿ ಅಕ್ಕಿಗೆ ₹ 23 ದರ ಬೀಳುತ್ತಿದ್ದು, ಸಾಗಣೆ ವೆಚ್ಚ ಸೇರಿ ₹40 ಆಗುತ್ತದೆ. ತಾಲ್ಲೂಕಿನ ಎಲ್ಲಾ ಕಡೆ ಭೇಟಿ ನೀಡಿ ಗೋದಾಮುಗಳನ್ನು ಪರಿಶೀಲಿಸಿ ವರದಿ ನೀಡಲು ಆಹಾರ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದರು.

ಎರಡು ದಿನದ ಹಿಂದೆಯಷ್ಟೇ ಬಂಗಾರಪೇಟೆ ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಸೈಯದ್‌ ಮಾಡ್ರನ್‌ ಅಕ್ಕಿ ಗಿರಣಿಯಲ್ಲಿ ಅಕ್ರಮ ದಾಸ್ತಾನು ಇಟ್ಟಿದ್ದ 1,763 ಕ್ವಿಂಟಲ್‌ ಅಕ್ಕಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ.

‌‌ವಶಕ್ಕೆ ಪಡೆದ ಆಹಾರಧಾನ್ಯ ದಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾ ಣವೇ ಹೆಚ್ಚು. ಅನ್ನಭಾಗ್ಯ ಚೀಲದಿಂದ ಬೇರೆ ಚೀಲಕ್ಕೆ ತುಂಬಿ ಸಾಗಿಸುತ್ತಾರೆ.
–ಗ್ಯಾನೇಂದ್ರ ಕುಮಾರ್‌ ಗಂಗ್ವಾರ್‌, ಜಂಟಿ ನಿರ್ದೇಶಕ (ಐಟಿ), ಆಹಾರ ಇಲಾಖೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.