ADVERTISEMENT

ಇನ್ನೂ ಕೆಲವು ಅತೃಪ್ತ ಶಾಸಕರ ರಾಜೀನಾಮೆ?

ಸಿಂಗ್ ರಾಜೀನಾಮೆ ಪತ್ರ ಪರಿಶೀಲಿಸಿ ನಿರ್ಧಾರ: ಸ್ಪೀಕರ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 20:16 IST
Last Updated 2 ಜುಲೈ 2019, 20:16 IST
   

ಬೆಂಗಳೂರು: ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ನ ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ರಾಜ್ಯ ರಾಜಕೀಯದಲ್ಲಿ ಗೊಂದಲ ಉಂಟು ಮಾಡಿದ್ದು, ಈ ಸರಣಿಗೆ ಇನ್ನಷ್ಟು ಶಾಸಕರು ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

ವಿಜಯನಗರ ಶಾಸಕ ಆನಂದ್‌ ಸಿಂಗ್‌ ನೀಡಿರುವ ರಾಜೀನಾಮೆ ಪತ್ರವನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್, ‘ಡಾ.ಉಮೇಶ ಜಾಧವ ರಾಜೀನಾಮೆ ಪ್ರಕರಣದಲ್ಲಿ ಅನುಸರಿಸಿದ ನಿಯಮ
ಗಳನ್ನೇ ಪಾಲಿಸುತ್ತೇನೆ. ಆನಂದ್‌ಸಿಂಗ್‌ ಅವರನ್ನು ಕರೆಸಿ ವಿವರಣೆ ಕೇಳುತ್ತೇನೆ’ ಎಂದು ತಿಳಿಸಿದರು.

ರಾಜೀನಾಮೆ ವಿಷಯ ಕಾಂಗ್ರೆಸ್–ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದ್ದು, ಸವಾಲು–ಜವಾಬುಗಳು ನಡೆದಿವೆ. ಈ ಬೆಳವಣಿಗೆಗಳ ಮಧ್ಯೆಯೇ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ‘ಯಾವೊಬ್ಬ ಶಾಸಕನೂ ರಾಜೀನಾಮೆ ನೀಡುವುದಿಲ್ಲ. ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ’ ಎಂದೂ ವೇಣುಗೋಪಾಲ್ ಪ್ರತಿಪಾದಿಸಿದರು.

ADVERTISEMENT

ಮಂಗಳವಾರ ಅಮಾವಾಸ್ಯೆ ಕಾರಣ ರಾಜೀನಾಮೆ ಪರ್ವ ಮುಂದುವರಿದಿಲ್ಲ. ಬುಧವಾರ ಮತ್ತು ಗುರುವಾರ ತಲಾ ಇಬ್ಬರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಡಿದೆ.

ಬಿ.ಸಿ.ಪಾಟೀಲ, ಬಿ.ನಾಗೇಂದ್ರ, ಮಹೇಶ್‌ ಕುಮಠಳ್ಳಿ, ಪ್ರತಾಪಗೌಡ ಪಾಟೀಲ ಅವರ ಹೆಸರುಗಳು ಕೇಳಿ ಬರುತ್ತಿವೆ.

ಮೋದಿ–ಷಾ ಕಾರಣರು: ‘ಮೈತ್ರಿ ಸರ್ಕಾರವನ್ನು ಕೆಡವಲು ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್‌ ಷಾ ಮುಂದಾಗಿದ್ದಾರೆ. ಅವರ ನೇತೃತ್ವದಲ್ಲಿಯೇ ಈ ಬೆಳವಣಿಗೆ ನಡೆದಿದೆ’ ಎಂದು ಸಮ್ಮಿಶ್ರ ಸರ್ಕಾರದಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಿಡಿಕಾರಿದರು.

‘ಈ ಬಾರಿಯೂ ಅವರ ಕುತಂತ್ರ ಯಶಸ್ವಿ ಆಗುವುದಿಲ್ಲ. ಹಣ, ಅಧಿಕಾರದ ಆಮಿಷವೊಡ್ಡಿ ಸರ್ಕಾರದ ಪತನಕ್ಕೆ ಮುಂದಾಗಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದಾರೆ’ ಎಂದೂ ಅವರು ಹೇಳಿದರು.

‘ಕಾಂಗ್ರೆಸ್‌ನ ಯಾವುದೇ ಒಬ್ಬ ಶಾಸಕ ಬಿಜೆಪಿಗೆ ಹೋಗುವುದಿಲ್ಲ. ಸರ್ಕಾರ ಸುರಕ್ಷಿತವಾಗಿದೆ. ರಮೇಶ ಜಾರಕಿಹೊಳಿ ಮತ್ತು ಆನಂದ್‌ ಸಿಂಗ್ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಜೊತೆ ಮಾತನಾಡುತ್ತೇನೆ’ ಎಂದು ತಿಳಿಸಿದರು.

ಪ್ರತಿ ಆಪರೇಷನ್‌ ಮಾಡಲಿ– ಬಿಎಸ್‌ವೈ: ‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆಬಿಜೆಪಿ ಶಾಸಕರು ಹೋಗುವ ಮಾತೇ ಇಲ್ಲ. ಅವರಿಗೆ ಸಾಮರ್ಥ್ಯ ಇದ್ದರೆ ಪ್ರತಿಆಪರೇಷನ್‌ ಮಾಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದರು.

‘ನಾವು ಕಾಂಗ್ರೆಸ್‌ ಅಥವಾ ಜೆಡಿಎಸ್ ಪಕ್ಷದ ಯಾವುದೇ ಶಾಸಕರನ್ನು ಸಂಪರ್ಕಿಸಿಲ್ಲ. ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಲಿ ನೋಡೋಣ. ಪ್ರತಿ ಆಪರೇಷನ್‌ ಮಾಡುವುದಕ್ಕೆ ಯಾರಿಗೂ ತಡೆ ಒಡ್ಡಿಲ್ಲ’ ಎಂದರು.

‘ಸ್ಪೀಕರ್‌ ಕಚೇರಿ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಅಲ್ಲ’

‘ಫ್ಯಾಕ್ಸ್‌ ಮೂಲಕ ರಾಜೀನಾಮೆ ತೆಗೆದುಕೊಳ್ಳಲು ಸ್ಪೀಕರ್‌ ಕಚೇರಿ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಅಲ್ಲ. ನಾನು ಸ್ಪೀಕರ್‌. ಮಾಧ್ಯಮಗಳಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಯಾರ ದೊಡ್ಡಸ್ತಿಕೆಯೂ ಇಲ್ಲಿ ನಡೆಯುವುದಿಲ್ಲ’ ಎಂದು ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು, ಶಾಸಕ ರಮೇಶ ಜಾರಕಿಹೊಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ಒಂದು ರಾಜೀನಾಮೆ ಪತ್ರ ಮಾತ್ರ ಬಂದಿದೆ. ಬೇರೆಯವರ ರಾಜೀನಾಮೆ ಪತ್ರ ಬಂದಿಲ್ಲ’ ಎಂದು ಹೇಳಿದ ಅವರು, ‘ದನಗಳ ರೀತಿಯಲ್ಲಿ ವರ್ತನೆ ಮಾಡಲು ಆಗುವುದಿಲ್ಲ. ಸಂವಿಧಾನದ ನೀತಿ ನಿಯಮಗಳನ್ನು ಶಾಸಕರು ಮೊದಲು ತಿಳಿದುಕೊಳ್ಳಬೇಕು’ ಎಂದು ಕೆಂಡ ಕಾರಿದರು.

ಫ್ಯಾಕ್ಸ್‌ ಯಂತ್ರ ಇಲ್ಲದ ಕಚೇರಿಗೆ ಫ್ಯಾಕ್ಸ್‌: ತಾವು ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರ ಕಚೇರಿಗೆ ಫ್ಯಾಕ್ಸ್‌ ಮಾಡಿರುವುದಾಗಿ ಶಾಸಕ ಜಾರಕಿಹೊಳಿ ಸೋಮವಾರ ಹೇಳಿದ್ದರು. ‘ನಮ್ಮ ಕಚೇರಿಯಲ್ಲಿ ಫ್ಯಾಕ್ಸ್‌ ಯಂತ್ರವೇ ಇಲ್ಲ ಮತ್ತು ರಾಜೀನಾಮೆ ಪತ್ರ ತಲುಪಿಲ್ಲ’ ಎಂದು ಸಭಾಧ್ಯಕ್ಷರ ಕಚೇರಿ ಸಿಬ್ಬಂದಿ ತಿಳಿಸಿದರು.

ಕಾಲಭೈರವನಿಗೆ ಅನಿತಾ ಮೊರೆ

ಮೈತ್ರಿ ಸರ್ಕಾರ ಉಳಿವಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಶಾಸಕಿ ಅನಿತಾ ಅವರು ಆದಿಚುಂಚನಗಿರಿಯಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

***

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ.

– ಬಿ.ಸಿ.ಪಾಟೀಲ, ಕಾಂಗ್ರೆಸ್‌ ಶಾಸಕ, ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.