ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳನ್ನು, ಪಥಸಂಚಲನ, ಬೈಠಕ್‌ಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್‌ಎಸ್‌ಎಸ್ ನಿಷೇಧಕ್ಕೆ ಕರೆ ಕೊಟ್ಟಿರುವುದು ಕಾಂಗ್ರೆಸ್ಸಿಗರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
‘ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ಆರ್‌ಎಸ್‌ಎಸ್ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ’ ಎಂದು ಯತ್ನಾಳ ಹೇಳಿದ್ದಾರೆ.
‘ಸಂಘವನ್ನು (ಆರ್‌ಎಸ್‌ಎಸ್) ನಿಷೇಧ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್‌ಎಸ್‌ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಲಿ. ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್‌ಡಿಪಿಐನಂತಹ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧ ಮಾಡಲಿ. ಅನ್ಯ ಕೋಮಿನ ಹಬ್ಬಗಳಂದು ತಲ್ವಾರ್ ತೋರಿಸಿ ಬೀದಿಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವ ಪುಂಡರ ಹೆಡೆಮುರಿಕಟ್ಟಲಿ’ ಎಂದು ಯತ್ನಾಳ ಕಿಡಿಕಾರಿದ್ದಾರೆ.
‘ಬಕ್ರೀದ್ ಸೇರಿದಂತೆ ಇತರ ಹಬ್ಬಗಳಲ್ಲಿ ಆಗುವ ಪ್ರಾಣಿ ಬಲಿಯನ್ನು ನಿಷೇಧಿಸಲಿ. ದ್ವೇಷ, ಬೇರೆ ಧರ್ಮಗಳ ಬಗ್ಗೆ ತಪ್ಪು ವಿಚಾರಗಳನ್ನು ಕಲಿಸುವ ಮದರಸಾಗಳನ್ನು ನಿಷೇಧ ಮಾಡಲಿ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಹಾಗೂ ಅವರೇ ಪ್ರತಿನಿಧಿಸುವ ಕಲಬುರಗಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲಿ. ಸಂಘದ ನಿಷೇಧ ಕನಸಿನ ಮಾತು’ ಎಂದು ಯತ್ನಾಳ ಗುಡುಗಿದ್ದಾರೆ.
ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.