ADVERTISEMENT

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಎಫ್‌ಐಆರ್‌ನಲ್ಲಿ ಏನಿದೆ?

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:07 IST
Last Updated 5 ಜುಲೈ 2022, 19:07 IST
ಹುಬ್ಬಳ್ಳಿಯ ಉಣಕಲ್‌ ಕ್ರಾಸ್‌ ಬಳಿಯಿರುವ ದಿ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್ ಲಾಬಿಯಲ್ಲಿ ಪೊಲೀಸರು ಮಂಗಳವಾರ ಚಂದ್ರಶೇಖರ ಗುರೂಜಿ ಹತ್ಯೆಗೀಡಾದ ಸ್ಥಳವನ್ನು ಪರಿಶೀಲಿಸಿದರು
ಹುಬ್ಬಳ್ಳಿಯ ಉಣಕಲ್‌ ಕ್ರಾಸ್‌ ಬಳಿಯಿರುವ ದಿ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್ ಲಾಬಿಯಲ್ಲಿ ಪೊಲೀಸರು ಮಂಗಳವಾರ ಚಂದ್ರಶೇಖರ ಗುರೂಜಿ ಹತ್ಯೆಗೀಡಾದ ಸ್ಥಳವನ್ನು ಪರಿಶೀಲಿಸಿದರು   

ಹುಬ್ಬಳ್ಳಿ:ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ (57) ಅವರನ್ನು ಇಲ್ಲಿನ ಉಣಕಲ್‌ ಕ್ರಾಸ್‌ನಲ್ಲಿರುವ ದಿ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್‌ ಲಾಬಿಯಲ್ಲಿ ಅವರ ಇಬ್ಬರು ಆಪ್ತರು ಮಂಗಳವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಕಲಘಟಗಿ ತಾಲ್ಲೂಕಿನ ದುಮ್ಮವಾಡದ ಮಹಾಂತೇಶ ಶಿರೂರ ಮತ್ತು ಧಾರವಾಡದ ಮಂಜುನಾಥ ಮರೇವಾಡ ಹತ್ಯೆ ಆರೋಪಿಗಳು.

ಘಟನೆಗೆ ಸಂಬಂಧಿಸಿಗುರೂಜಿ ಅವರ ಸಹೋದರನ ಮಗ ಸಂಜಯ್‌ ಅಂಗಡಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಸರಳ ವಾಸ್ತು ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ್ದ ಕಾರಣಕ್ಕೆ ಮಹಾಂತೇಶ ಅವರನ್ನು ಚಂದ್ರಶೇಖರ ಗುರೂಜಿ ಕೆಲಸದಿಂದ ತೆಗೆದಿದ್ದರು. ಆ ಸಿಟ್ಟಿನಿಂದ ಹುಬ್ಬಳ್ಳಿ ಗೋಕುಲ ರಸ್ತೆ, ಜೆಸಿ ನಗರದಲ್ಲಿ ಗುರೂಜಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗ ಕೊಟ್ಟಿರಲಿಲ್ಲ ಹಾಗೂ ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಎಂದು ಮಹಾಂತೇಶ ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಹಿಂಪಡೆಯಲು ಗುರೂಜಿ ಅವರಲ್ಲಿ ಹಣ ಕೇಳುತ್ತಿದ್ದರು. ಆಗಾಗ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಹಣ ನೀಡದ ಹಿನ್ನೆಲೆಯಲ್ಲಿ ಹಾಗೂ ಕೆಲಸದಿಂದ ತೆಗೆದು ಹಾಕಿದ್ದರಿಂದ ಹತ್ಯೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರ ಅಂತ್ಯಕ್ರಿಯೆ ಇಂದು

ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಕುಟುಂಬದ ಹೊಲದಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ.

‘ಬೆಳಿಗ್ಗೆ 10ಕ್ಕೆ ಗುರೂಜಿ ಅವರ ಪಾರ್ಥಿವ ಶರೀರವನ್ನು ಹೊಲದಲ್ಲೇ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮಧ್ಯಾಹ್ನ 1ಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಗುರೂಜಿ ಅವರ ಆಪ್ತರಾದ ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ ತಿಳಿಸಿದರು.

ಸಂಬಂಧಿತ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.