ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ
ಕುಮಾರಸ್ವಾಮಿಗೆ ಗೂಢಚರ್ಯೆ ಪಾಠವನ್ನು ಅವರ ಪೂಜ್ಯ ತಂದೆಯೇ ಹೇಳಿಕೊಟ್ಟಿರಬಹುದು: CM
ಬೆಂಗಳೂರು: ಫೋನ್ ಕದ್ದಾಲಿಕೆ ಎಲ್ಲರ ಕಾಲದಲ್ಲಿಯೂ ಇದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೆಣಕಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯವರಿಗೆ ಈ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು ಎಂದು ಕುಹಕವಾಡಿದ್ದಾರೆ.
ಪ್ರಜಾವಾಣಿ ವರದಿ ಹಂಚಿಕೊಂಡು ಈ ಕುರಿತು ಸುಧೀರ್ಘ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಇತ್ತೀಚಿನ ರಾಜಕೀಯ ಇತಿಹಾಸದ ಪುಟಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಫೋನ್ ಕದ್ದಾಲಿಕೆ, ಗೂಢಚರ್ಯೆಗಳೆಲ್ಲ ಯಾವ ಪಕ್ಷದ ದುಷ್ಕೃತ್ಯಗಳು ಎನ್ನುವುದು ಅರಿವಾಗುತ್ತದೆ. ಈ ದುರ್ಬುದ್ದಿಯ ಕಾರಣದಿಂದಾಗಿಯೇ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣ, ವಚನಭಂಗದಂತಹ ಅನಿಷ‍್ಠಗಳು ಕಾಣಿಸಿಕೊಂಡಿರುವುದು. 2004ರಿಂದ 2013 ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಜ್ಯ ಐದು ಮುಖ್ಯಮಂತ್ರಿಗಳನ್ನು, 2018ರಿಂದ 2023ರ 5 ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಾಣುವಂತಾಗಲು ಇವರೊಳಗಿನ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಬೆನ್ನಿಗೆ ಚೂರಿ ಹಾಕುವ ಕುತಂತ್ರಗಳೇ ಕಾರಣ ಎಂದು ಲೇವಡಿ ಮಾಡಿದ್ದಾರೆ.
2018ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ. ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ. ಅಧಿಕಾರವನ್ನು ದುರ್ಬಳಕೆ ಮಾಡಿ ಸರ್ಕಾರಿ ಯಂತ್ರಗಳ ಮೂಲಕವೇ ವಿರೋಧ ಪಕ್ಷದ ನಾಯಕರನ್ನು ಮಾತ್ರವಲ್ಲ, ಸ್ವಪಕ್ಷದಲ್ಲಿ ತಮ್ಮ ನಾಯಕತ್ವಕ್ಕೆ ಪೈಪೋಟಿ ನೀಡಬಲ್ಲ ನಾಯಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೆ ಬಂದ ದಿನದಿಂದಲೇ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ ಎಂದು ಆರೋಪಿಸಿದ್ದಾರೆ.
ಹಾಡಹಗಲೇ ಪೊಲೀಸ್, ಸಿಬಿಐ, ಇಡಿ, ಐಟಿ ಇಲಾಖೆಗಳ ದುರ್ಬಳಕೆಯಾಗುತ್ತಿರುವ ಬಗ್ಗೆ ಇಡೀ ದೇಶದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹವರು ತಮ್ಮ ರಾಜಕೀಯ ವಿರೋಧಿಗಳ ಫೋನ್ ಗಳನ್ನು ಕದ್ದು ಆಲಿಸದೆ ಬಿಡುತ್ತಾರೆಯೇ? ಆದರೆ ಇಂತಹ ಬೆದರಿಕೆಗಳಿಗೆ ನಾನಾಗಲಿ, ನನ್ನ ಪಕ್ಷದ ಯಾವ ನಾಯಕರಾಗಲಿ ಜಗ್ಗುವವರಲ್ಲ, ಬಗ್ಗುವವರೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ದೇವೇಗೌಡರು ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಡಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ ಎಂದು ನೆನಪಿಸಿದ್ದಾರೆ.
ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎನ್ನುವುದು ವಿಷಾದನೀಯ ವಾಸ್ತವ. ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರು ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷಗಳ ಕಾಲ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಠೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.