ADVERTISEMENT

ರಾಜ್ಯದ ಅಧಿಕಾರ ಕೇಂದ್ರದಿಂದ ಕಬ್ಜಾ: ರಾಜ್ಯೋತ್ಸವದಲ್ಲಿ ಸಿದ್ದರಾಮಯ್ಯ ಕಿಡಿ

ಬಿಡಿಗಾಸು ಕೊಟ್ಟು ಸಾವಿರಾರು ಕೋಟಿ ರೂಪಾಯಿ ವಂಚಿಸುತ್ತಿರುವ ಕೇಂದ್ರ ಸರ್ಕಾರ ಎಂದು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 23:30 IST
Last Updated 1 ನವೆಂಬರ್ 2025, 23:30 IST
<div class="paragraphs"><p>ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜ್ಯೋತ್ಸವದಲ್ಲಿ ಕನ್ನಡದ ಹಿರಿಮೆ ಬಿಂಬಿಸುವ ನೃತ್ಯ ಪ್ರದರ್ಶಿಸಿದ ಶಾಲಾ ವಿದ್ಯಾರ್ಥಿಗಳು&nbsp;</p></div>

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರಾಜ್ಯೋತ್ಸವದಲ್ಲಿ ಕನ್ನಡದ ಹಿರಿಮೆ ಬಿಂಬಿಸುವ ನೃತ್ಯ ಪ್ರದರ್ಶಿಸಿದ ಶಾಲಾ ವಿದ್ಯಾರ್ಥಿಗಳು 

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಕನಸು ನಮ್ಮ ಸಂವಿಧಾನ ಪಿತೃಗಳದ್ದಾಗಿತ್ತು. ಅದನ್ನು ಕಳೆದ ಕೆಲವು ವರ್ಷಗಳಿಂದ ಛಿದ್ರಗೊಳಿಸಿ ರಾಜ್ಯಗಳ ಅಧಿಕಾರವನ್ನು ಕಬ್ಜಾ ಮಾಡುವ ವಸಾಹತುವಾದಿ ಮನೋಭಾವ ಕಾಣುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ADVERTISEMENT

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ
ಮಾತನಾಡಿದ ಅವರು, ‘ಕೇಂದ್ರದ ಈ ತಾರತಮ್ಯಗಳ ವಿರುದ್ಧ ಇಡೀ ನಾಡು ಸಂವಿಧಾನಾತ್ಮಕವಾಗಿ ನಿಂತು ಪ್ರತಿಭಟಿಸದೆ ಹೋದರೆ ಕೇಂದ್ರವು ನಮ್ಮನ್ನು ಆಪೋಶನ ತೆಗೆದುಕೊಳ್ಳಲಿದೆ’ ಎಂದರು. 

‘ಒಕ್ಕೂಟ ಸರ್ಕಾರಕ್ಕೆ ₹4.5 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ, ನಮ್ಮ ರಾಜ್ಯದ ಪಾಲನ್ನು ನೀಡದೇ, ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ’ ಎಂದು ದೂರಿದರು.

ಐದು ವರ್ಷಗಳಲ್ಲಿ 15ನೇ ಹಣಕಾಸು ಆಯೋಗದ ಮೂಲಕ ಕೇಂದ್ರವು ಮಾಡಿದ ದ್ರೋಹದಿಂದ ಸುಮಾರು ₹70 ಸಾವಿರ ಕೋಟಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಅನುದಾನ, ಕೇಂದ್ರವು ಬಜೆಟ್‌ನಲ್ಲಿ ಘೋಷಿಸಿ ಕೊಡದೆ ಹೋದ ಅನುದಾನ, ಯೋಜನೆಗಳಲ್ಲಾದ ಅನ್ಯಾಯ ಸೇರಿ ₹1 ಲಕ್ಷ ಕೋಟಿಗಿಂತಲೂ ಹೆಚ್ಚು ಅನುದಾನ ರಾಜ್ಯಕ್ಕೆ ಬರಬೇಕಿದೆ ಎಂದು ಅವರು ಅಂಕಿ ಅಂಶ ನೀಡಿದರು.

‘ಒಕ್ಕೂಟ ಸರ್ಕಾರದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ಜನ ಸಮುದಾಯವು ಕೂಡ ಗಂಭೀರವಾಗಿ ಪ್ರಶ್ನಿಸಬೇಕಾದ ಅನಿವಾರ್ಯ ಸಂದರ್ಭ ಉದ್ಭವಿಸಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಮಾಹಿತಿ ತಂತ್ರಜ್ಞಾನ‌ ಯುಗ ಈಗ ಕೃತಕ ಬುದ್ಧಿಮತ್ತೆಯ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗಬಹುದು ಎಂಬ ಆತಂಕವೂ ಎದುರಾಗಿದೆ. ಉದ್ಯೋಗ ನಷ್ಟವಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಕನ್ನಡ ಪ್ರೇಮವನ್ನು ಸಾರುವ ನೃತ್ಯಗಳು ಪ್ರದರ್ಶನಗೊಂಡವು.

‘ನಾನು ದ್ವಿಭಾಷಾ ನೀತಿ ಪರ’

‘ನಾನು ವೈಯುಕ್ತಿಕವಾಗಿ ದ್ವಿಭಾಷಾ ನೀತಿ ಪರವಾಗಿ ಇದ್ದೇನೆ. ದ್ವಿಭಾಷಾ ನೀತಿಯಾಗಿ ಕಾನೂನು ಜಾರಿ ಆಗಬೇಕಾದರೆ ಸಚಿವ ಸಂಪುಟದಲ್ಲಿ ಚರ್ಚಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕಚೇರಿಗಳಲ್ಲಿ ಕನ್ನಡ ಧ್ವಜ ಕಡ್ಡಾಯ’

‘ನವೆಂಬರ್ ತಿಂಗಳಲ್ಲಿ ಖಾಸಗಿ‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

‘ನಮ್ಮ ರಾಜ್ಯ ಮಾತ್ರ ನಾಡಗೀತೆ, ಕನ್ನಡ ಬಾವುಟ, ಪ್ರತಿಮೆ ಹೊಂದಿದೆ. ದೇಶದ ಯಾವ ರಾಜ್ಯವೂ ಇವುಗಳನ್ನು ಹೊಂದಿಲ್ಲ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ. ಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಿಸುವುದನ್ನು ಕಡ್ಡಾಯ ಮಾಡಿದ್ದೇವೆ’ ಎಂದರು. ‘ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಸಿಎಂ ಹೇಳಿದ್ದೇನು?

  • ಹಿಂದಿ ಭಾಷೆ ಹೇರಿಕೆಗೆ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗಷ್ಟೇ ಅನುದಾನ ನೀಡಲಾಗುತ್ತಿದೆ. ಕನ್ನಡ ಸೇರಿದಂತೆ ಉಳಿದ ಭಾಷೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ.

  •  ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡುತ್ತಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀ ಡಿದ್ದರೂ ಅನುದಾನಗಳನ್ನು ಕೊಡದೆ ಅನ್ಯಾಯ ಮಾಡಲಾಗುತ್ತಿದೆ.

  •  ಶಿಕ್ಷಣದಲ್ಲಿ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಮತ್ತು ಇಂಗ್ಲಿಷ್‌ಗೆ ಆದ್ಯತೆ ನೀಡುತ್ತಿರುವುದರಿಂದ ಬೇರೆ ಯಾವುದೇ ಭಾಷೆಗೆ ಬಾರದ ಆತಂಕ ಕನ್ನಡಕ್ಕೆ ಎದುರಾಗಿದೆ.

ರಾಜ್ಯದಲ್ಲಿ ಶತಮಾನ ಪೂರೈಸಿದ 3,000 ಸರ್ಕಾರಿ ಶಾಲೆಗಳಿವೆ. ಈ ಬಾರಿ ₹2,500 ಕೋಟಿ ವೆಚ್ಚದಲ್ಲಿ 800 ಸರ್ಕಾರಿ ಶಾಲೆಗಳನ್ನು, 100 ಉರ್ದು ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. 
–ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.