ADVERTISEMENT

ಜನರ ಕಣ್ಗಾವಲಿಗೆ ತಂತ್ರಾಂಶ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:14 IST
Last Updated 6 ಫೆಬ್ರುವರಿ 2026, 16:14 IST
<div class="paragraphs"><p>ಅಮಿತ್ ಮಾಳವೀಯ</p></div>

ಅಮಿತ್ ಮಾಳವೀಯ

   

ಬೆಂಗಳೂರು: ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರವು ‘ಸೋಷಿಯಲ್‌ ಮೀಡಿಯಾ ಅನಾಲಿಟಿಕ್ಸ್‌ ಸಲ್ಯೂಷನ್ಸ್‌’ ಮೂಲಕ ಸದ್ದಿಲ್ಲದೇ ಸಾರ್ವಜನಿಕರ ಮೇಲೆ ಕಣ್ಗಾವಲಿಡುವ ವ್ಯವಸ್ಥೆ ಜಾರಿ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.

ಈ ಕುರಿತು ‘ಎಕ್ಸ್‌’ ಮಾಡಿರುವ ಬಿಜೆಪಿಯ ಅಮಿತ್ ಮಾಳವೀಯ ಅವರು, ‘ಸುಳ್ಳು ಸುದ್ದಿ ಮತ್ತು ಹಾನಿಕಾರ ಮಾಹಿತಿಯನ್ನು ಪತ್ತೆ ಮಾಡುವುದಕ್ಕಾಗಿ ಎಂದರೂ, ಜನ ಸಾಮಾನ್ಯರ ಸಾಮಾಜಿಕ ಮತ್ತು ವೈಯಕ್ತಿಕ ಡಿಜಿಟಲ್‌ ಸಂವಹನದೊಳಗೆ ಈ ತಂತ್ರಾಂಶ ಮೂಗು ತೂರಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಇದು ಸರ್ಕಾರಿ ಪ್ರಾಯೋಜಿತ ಕಣ್ಗಾವಲು. ಇದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಖಾಸಗಿತನದ ಮೇಲಿನ ದಾಳಿ. ಕರ್ನಾಟಕವನ್ನು ಪೊಲೀಸ್‌ ರಾಜ್ಯವಾಗಿಸುವ ನಿಟ್ಟಿನಲ್ಲಿ ಒಂದು ಕ್ರೂರ ಹೆಜ್ಜೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸರ್ಕಾರಕ್ಕೆ ಜನರ ಮುಕ್ತ ಅಭಿಪ್ರಾಯ ಮತ್ತು ಆಲೋಚನೆಗಳ ಬಗ್ಗೆ ಭಯವಿದೆ. ಹೀಗಾಗಿ ನಿಗಾ ಮತ್ತು ರಕ್ಷಣೆ ಇತ್ಯಾದಿ ಪದಗಳನ್ನು ಬಳಸುತ್ತಿದೆ. ಈ ಮೂಲಕ ಜನರನ್ನು ಬೆದರಿಸುವ, ಮಾಹಿತಿ ಸಂಗ್ರಹಿಸುವ ಮತ್ತು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಈ ಹುನ್ನಾರವನ್ನು ಬಯಲಿಗೆಳೆಯುವ ಮೂಲಕ ಪ್ರಬಲವಾಗಿ ವಿರೋಧಿಸಲಾಗುವುದು’ ಎಂದು ಹೇಳಿದ್ದಾರೆ.

ವಿರೋಧಿಗಳ ಪತ್ತೆಗೆ ₹67 ಕೋಟಿ: ‘ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಸರ್ಕಾರ ತಯಾರಿರಲಿಲ್ಲ. ತನ್ನ ವಿರುದ್ಧ ಮಾತನಾಡುವವರನ್ನು ಪತ್ತೆ ಮಾಡಲು ಕಾಂಗ್ರೆಸ್‌ ಸರ್ಕಾರ ₹67 ಕೋಟಿ ದುಂದು ವೆಚ್ಚ ಮಾಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.