ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಒಗ್ಗಟ್ಟಿನ ಸಂಕೇತ
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟು ಎಚ್ಚರಿಕೆ ಬಳಿಕ ತಣ್ಣಗಾಗಿದ್ದ ಮುಖ್ಯಮಂತ್ರಿ ಬದಲಾವಣೆ ವಿಷಯ ಮತ್ತೆ ಮುಂಚೂಣಿಗೆ ಬಂದಿದೆ. ‘ಸೆಪ್ಟೆಂಬರ್ ಕ್ರಾಂತಿ’ಯ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರಸ್ತಾಪಿಸಿದ್ದ ತರುವಾಯ, ನಾಯಕತ್ವ ಕುರಿತ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಬಿರುಸುಗೊಂಡಿದೆ.
‘ಮುಖ್ಯಮಂತ್ರಿ ಬದಲಾವಣೆ ಸೂಚನೆ ಇಲ್ಲ’ ಎಂದು ವಿಧಾನಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದ್ದರು. ಆ ಬೆನ್ನಲ್ಲೇ, ಹಲವು ಸ್ವರ–ಅಪಸ್ವರಗಳು ಎದ್ದಿದ್ದವು. ಈ ಬೆಳವಣಿಗೆಗಳ ಕುರಿತು ಮಾತನಾಡಿದ ಖರ್ಗೆಯವರು, ‘ಹೈಕಮಾಂಡ್ ಕೈಯಲ್ಲಿ ಎಲ್ಲವೂ ಇದೆ’ ಎಂದು ಭಿನ್ನಸ್ವರದಲ್ಲಿ ತಾಳ ಹಾಕಿದ್ದಾರೆ. ಮೈಸೂರಿನಲ್ಲಿದ್ದ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಕೈಯೆತ್ತಿ ಹಿಡಿದು ‘ನಾವಿಬ್ಬರೂ ಬಂಡೆಯಂತಿದ್ದೇವೆ’ ಎಂದು ‘ಒಗ್ಗಟ್ಟು’ ತೋರಿದ್ದಾರೆ.
‘ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸುವುದು ಹೈಕಮಾಂಡ್ ಕೈಯಲ್ಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಹೈಕಮಾಂಡ್ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂದು ಯಾರೂ ಹೇಳಲು ಆಗುವುದಿಲ್ಲ. ಕ್ರಮ ಕೈಗೊಳ್ಳುವ ಹಕ್ಕು ಹೈಕಮಾಂಡ್‌ಗೆ ಇದೆ. ಈ ವಿಚಾರದಲ್ಲಿ ಯಾರೂ ಅನಗತ್ಯ ಗೊಂದಲ ಉಂಟು ಮಾಡಬಾರದು’ ಎಂದರು.
‘ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಅವರು ಏನೇನು ನಡೆದಿದೆ ಎಂದು ಶಾಸಕರಿಂದ ಮಾಹಿತಿ ಪಡೆಯುತ್ತಾರೆ. ಅದನ್ನು ನೋಡಿಕೊಂಡು ಮುಂದೇನು ಮಾಡಬೇಕೆಂದು ನೋಡೋಣ’ ಎಂದರು.
ಸಚಿವರು, ಶಾಸಕರ ವಿಭಿನ್ನ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ, ‘ಅವರೆಲ್ಲರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ಉತ್ತರ ಕೊಡುವುದು ಎಐಸಿಸಿ ಮಟ್ಟದ ಪ್ರಶ್ನೆಗೆ ಮಾತ್ರ. ಇಲ್ಲಿಯ ಪ್ರತಿಯೊಂದಕ್ಕೂ ಉತ್ತರ ಕೊಡಲು ಹೋದರೆ ಸಾಕಷ್ಟು ವಿಚಾರಗಳಿವೆ’ ಎನ್ನುತ್ತಾ ಖರ್ಗೆ ಗರಂ ಆದರು.
‘ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಭದ್ರವಾಗಿರುತ್ತದೆ. ನನ್ನ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಯಾರೇ ತಂದು ಹಾಕುವ ಪ್ರಯತ್ನ ಮಾಡಿದರೂ ಪ್ರಯೋಜನವಿಲ್ಲ. ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರ ಎದುರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕೈಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದ ಅವರು ‘ನಮ್ಮ ಬಗ್ಗೆ ಮಾತನಾಡುವ ಬಿ.ಶ್ರೀರಾಮುಲು ಎಷ್ಟು ಬಾರಿ ಚುನಾವಣೆ ಸೋತಿದ್ದಾರೆ ಎಂಬುದು ಗೊತ್ತಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನು ಈ ಬಾರಿಯ ದಸರಾ ಜಂಬೂಸವಾರಿ ಉದ್ಘಾಟಿಸುವುದು ಸತ್ಯ’ ಎಂದರು. ‘ರಣದೀಪಸಿಂಗ್ ಸುರ್ಜೇವಾಲಾ ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಅವರು ನಮ್ಮ ಪಕ್ಷದ ಶಾಸಕರ ಕಷ್ಟ-ಸುಖ ಕೇಳುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಅದೆಲ್ಲ ಮಾಧ್ಯಮಗಳ ಕಲ್ಪನೆ ಮಾತ್ರ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು. ಸ್ವಪಕ್ಷೀಯ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅಹವಾಲು ಆಲಿಸಲು ರಾಜ್ಯಕ್ಕೆ ಸೋಮವಾರ ಬಂದಿರುವ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ಗ್ಯಾರಂಟಿ ಯೋಜನೆಗಳ ಕುರಿತು ಶಾಸಕರಿಂದ ಮಾಹಿತಿ ಪಡೆಯುತ್ತೇನೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹೇಗಿದೆ ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೇ ಮುಂತಾದ ಮಾಹಿತಿಗಳನ್ನು ಪಡೆಯುತ್ತೇನೆ’ ಎಂದರು. ‘ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವುದರಿಂದ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮಾಹಿತಿ ನೀಡಲು ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆಯೂ ಶಾಸಕರಿಂದ ಮಾಹಿತಿ ಪಡೆಯುತ್ತೇನೆ’ ಎಂದು ಸುರ್ಜೇವಾಲಾ ತಿಳಿಸಿದರು.
‘ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಕೆಲವು ನಾಯಕರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಪಕ್ಷದ ‘ಲಕ್ಷ್ಮಣ ರೇಖೆ’ಯನ್ನು ಯಾರೂ ದಾಟಬಾರದು’ ಎಂದರು. ‘ಶಾಸಕರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಪ್ಪು ಎಂದು ನಾನು ಭಾವಿಸುವುದಿಲ್ಲ. ಆ ಬಗ್ಗೆ ಪಕ್ಷದ ಉಸ್ತುವಾರಿ ಪರಿಶೀಲಿಸುತ್ತಾರೆ’ ಎಂದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ ‘ರಾಜ್ಯದಲ್ಲಿ ಸೆಪ್ಟೆಂಬರ್ ನಂತರ ‘ಕ್ರಾಂತಿ’ ಆಗಲಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು. ‘ಕೆಲವು ಸಂದರ್ಭಗಳಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತದೆ. ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ ಹೈಕಮಾಂಡ್‌ನವರು ಮಾತನಾಡುವುದು ಸಹಜ. ನಾನು ಕೂಡಾ ಸುರ್ಜೇವಾಲಾ ಅವರನ್ನು ಮಂಗಳವಾರ ಮಧ್ಯಾಹ್ನ ಭೇಟಿಯಾಗಲಿದ್ದು ನನ್ನ ಭೇಟಿ ವೈಯಕ್ತಿಕ’ ಎಂದರು.
ಕಾಂಗ್ರೆಸ್ ಹೈಕಮಾಂಡ್ ಭೂತವಿದ್ದಂತೆ. ಅದು ಯಾರಿಗೂ ಕಾಣಿಸುವುದಿಲ್ಲ, ಕೇಳಿಸುವುದಿಲ್ಲ. ಆದರೆ ಅನುಭವಕ್ಕೆ ಸಿಗುತ್ತದೆ. ಕಾಂಗ್ರೆಸ್ ಅಧ್ಯಕ್ಷರೇ ಹೈಕಮಾಂಡ್ ಎಂದು ಜನ ಭಾವಿಸಿದ್ದರು. ಆದರೆ ಅವರಲ್ಲತೇಜಸ್ವಿ ಸೂರ್ಯ, ಸಂಸದ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಆಕ್ಸಿಡೆಂಟಲ್ ಪ್ರೆಸಿಡೆಂಟ್’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಏನು ಯೋಚಿಸುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಸ್ವತಃ ಖರ್ಗೆ ಹೇಳಿದ್ದಾರೆ. ಇದರ ಅರ್ಥ ಕಾಂಗ್ರೆಸ್ ಪಕ್ಷವನ್ನು ಖರ್ಗೆ ಅವರು ಮುನ್ನಡೆಸುತ್ತಿಲ್ಲ. ಎಲ್ಲವೂ ಗಾಂಧಿ ಕುಟುಂಬದಿಂದಲೇ ನಿರ್ದೇಶಿಸಲ್ಪಟ್ಟಿದೆ. ಇವರೊಬ್ಬ ‘ಆಕ್ಸಿಡೆಂಟಲ್ ಪ್ರೆಸಿಡೆಂಟ್’ ಅಷ್ಟೇ’ ಎಂದು ಅವರು ‘ಎಕ್ಸ್’ ಮೂಲಕ ಕುಟುಕಿದ್ದಾರೆ. ‘ಕಾಂಗ್ರೆಸ್ ಪಕ್ಷ ಮತ್ತೊಬ್ಬ ‘ಆಕ್ಸಿಡೆಂಟಲ್’ ನಾಯಕನನ್ನು ನೀಡಿದೆ ಎಂದು ಅನಿಸುತ್ತಿದೆ. ಮೊದಲು ‘ಆಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್’ ಆಗಿ ಮನಮೋಹನ್‌ಸಿಂಗ್ ಅವರನ್ನು ನೀಡಿತ್ತು. ಸಿಂಗ್ ಪ್ರಧಾನಿ ಆಗಿದ್ದರೂ ಅವರಿಗೆ ಯಾವುದೇ ಅಧಿಕಾರ ಇರಲಿಲ್ಲ. ಈಗ ಖರ್ಗೆ ಅಧ್ಯಕ್ಷರಾಗಿದ್ದರೂ ಯಾವುದೇ ಅಧಿಕಾರ ಇಲ್ಲ’ ಎಂದು ಅಶೋಕ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.