ADVERTISEMENT

ಪ್ರೊ.ಜಿ.ರಾಮಕೃಷ್ಣ ಸಹಿತ ಮೂವರಿಗೆ ನಾಡೋಜ ಗೌರವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 11:19 IST
Last Updated 23 ಫೆಬ್ರುವರಿ 2026, 11:19 IST
   

ಹೊಸಪೇಟೆ (ವಿಜಯನಗರ): ಚಿಂತಕ, ಶಿಕ್ಷಣ ತಜ್ಞ ಪ್ರೊ.ಜಿ.ರಾಮಕೃಷ್ಣ, ಶತಾಯುಷಿ ಸಾಹಿತಿ ಪ್ರೊ.ಸಿ.ಮಹದೇವಪ್ಪ ಮತ್ತು ನಿವೃತ್ತ ಸಾರಿಗೆ ಅಧಿಕಾರಿ ಹಾಗೂ ಸಮಾಜ ಸೇವಕ ಎಚ್.ಸಿ.ಸತ್ಯನ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಈ ಬಾರಿಯ ನಾಡೋಜ ಗೌರವಕ್ಕೆ ಪಾತ್ರರಾಗಲಿದ್ದಾರೆ.

ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ (ಘಟಿಕೋತ್ಸವ) ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ರ ಗೆಹಲೋತ್‌ ಅವರು ನಾಡೋಜ ಗೌರವ ಪ್ರದಾನ ಮಾಡುವರು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಸೋಮವಾರ ಕ್ಯಾಂಪಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸತ್ಯನ್ ಅವರ ವಿರುದ್ಧ ಪ್ರಕರಣಗಳಿವೆ ಎಂದು ಆರೋಪಿಸಿ ಎರಡು ಪತ್ರಗಳು ಬಂದಿವೆ, ಅದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ, ಪ್ರಕರಣ ಇತ್ಯರ್ಥವಾಗಿದೆ, ನಾಡೋಜ ನೀಡಿ ಗೌರವಿಸಿ ಎಂದು ರಾಜ್ಯಪಾಲರು ಸೂಚಿಸಿದ ಮೇರೆಗೆ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ‘ ಎಂದರು.

ADVERTISEMENT

ಮಂಗಳವಾರ ಮಧ್ಯಾಹ್ನದ ತನಕವೂ ಸಮಯ ಇದೆ, ಸತ್ಯನ್ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಉಳಿದಿರುವುದು ದೃಢಪಟ್ಟರೆ ಕೊನೆಯ ಕ್ಷಣದಲ್ಲಿ ಸಹ ಗೌರವವನ್ನು ತಡೆಹಿಡಿಯುವುದು ಸಾಧ್ಯವಿದೆ, ಸದ್ಯ ರಾಜ್ಯಪಾಲರೇ ಸತ್ಯನ್‌ ಅವರಿಗೆ ನಾಡೋಜ ನೀಡಿ ಗೌರವಿಸಲು ಸೂಚಿಸಿದ ಮೇರೆಗೆ ಗೌರವ ಪಡೆಯುವವರ ಪಟ್ಟಿಯಲ್ಲಿ ಅವರನ್ನೂ ಸೇರಿಸಲಾಗಿದೆ ಎಂದು ಕುಲಪತಿ ಹೇಳಿದರು.

ಈ ಬಾರಿ 107 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು. ಸ್ನಾತಕೋತ್ತರ ಪದವಿ ಪೂರೈಸಿದ 123 ಮಂದಿ ಸಹ ಪದವಿ ಪಡೆಯಲಿದ್ದಾರೆ. ಕೇವಲ 10 ಸಾವಿರದಷ್ಟು ಜನಸಂಖ್ಯೆ ಇರುವ ಮುಕ್ರಿ ಸಮುದಾಯದಲ್ಲೇ ಹುಟ್ಟಿ, ಪದವಿ, ಸ್ನಾತಕೋತ್ತರ ಪದವಿ ಗಳಿಸಿ ‘ಮುಕ್ರಿಗಳ ಮೌಖಿಕ ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ ಬರೆದ ಸಿ.ಪಿ.ಶಿವಚಂದ್ರ ಅವರು ಪಿಎಚ್‌.ಡಿ.ಪದವಿ ಪಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದು ಕುಲಪತಿ ಹೇಳಿದರು.

ಕುಲಸಚಿವ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ್ ಯತಗಲ್‌, ಹಣಕಾಸು ಅಧಿಕಾರಿ ಪ್ರೊ.ಎ.ಶ್ರೀಧರ್‌, ವಿವಿಧ ವಿಭಾಗಗಳ ಡೀನ್‌ಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.