ಬೆಂಗಳೂರು: ಮಣಿರತ್ನಂ ನಿರ್ದೇಶನದ, ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರವು ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
'ಕನ್ನಡ ತಮಿಳಿನಿಂದ ಹುಟ್ಟಿರುವುದು' ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ರಾಜಕೀಯ ನಾಯಕರು ಖಂಡಿಸಿದ್ದಾರೆ.
‘ಕಮಲ್ ಹಾಸನ್ ಅವರಿಗೆ ಕನ್ನಡದ ಇತಿಹಾಸದ ಬಗ್ಗೆ ಅರಿವಿಲ್ಲ' ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರೆ, 'ತಮ್ಮ ಮಾತೃಭಾಷೆಯನ್ನು ವೈಭವೀಕರಿಸುವ ಪ್ರಯತ್ನದಲ್ಲಿ ಕನ್ನಡವನ್ನು ಅಗೌರವ ಮಾಡಿರುವುದು ಸರಿಯಲ್ಲ, ಹೇಳಿಕೆ ಸಂಬಂಧ ಕಮಲ್ ಕ್ಷಮೆಯಾಚಿಸಬೇಕು' ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಕನ್ನಡ ಪರ ಸಂಘಟನೆಗಳು ರಾಜ್ಯದಾದ್ಯಂತ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕುವ ಮೂಲಕ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹಿಷ್ಕಾರದ ಕೂಗು ಹೆಚ್ಚಾಗಿದ್ದು, ಕನ್ನಡ ರಕ್ಷಣಾ ವೇದಿಕೆ ಸದಸ್ಯರು ರಾಜ್ಯದಲ್ಲಿ 'ಥಗ್ ಲೈಫ್' ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು, ನಿಷೇಧಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು 'ಥಗ್ ಲೈಫ್' ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
'ಥಗ್ ಲೈಫ್' ಚಿತ್ರದ ನಿರ್ಮಾಪಕರು ಹಾಗೂ ಕಮಲ್ ಹಾಸನ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಭಾರಿ ಪ್ರತಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಕಮಲ್ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
1987ರಲ್ಲಿ ಬಿಡುಗಡೆಗೊಂಡ 'ನಾಯಗನ್'ನಲ್ಲಿ ಕಮಲ್ ಹಾಸನ್‌ಗೆ ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ 35 ವರ್ಷಗಳ ಬಳಿಕ ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ಆರ್. ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗಿದೆ.
ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್, ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಕಥೆ, ಚಿತ್ರಕಥೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ರವಿ ಆರ್. ಚಂದ್ರನ್ ಛಾಯಾಚಿತ್ರಗ್ರಹಣ, ಅನ್ಬರಿವ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ‘ಥಗ್ ಲೈಫ್’ ಒಟಿಟಿ ಹಕ್ಕು ಪಡೆದಿದೆ.
ಥಗ್ ಲೈಫ್ ಜೂನ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.