ADVERTISEMENT

ಹುಲಿ ದಾಳಿ ಭೀತಿ: ರೈತರಿಗೆ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲು

ಅರಣ್ಯದಂಚಿನ ಗ್ರಾಮಗಳಲ್ಲಿ ಬೆಳೆ ಕಟಾವು ವೇಳೆ ಸಿಬ್ಬಂದಿ ಪಹರೆ

ಬಾಲಚಂದ್ರ ಎಚ್.
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಗ್ರಾಮದ ಜಮೀನುಗಳಲ್ಲಿ ಪಹರೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ 
ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಗ್ರಾಮದ ಜಮೀನುಗಳಲ್ಲಿ ಪಹರೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ    

ಚಾಮರಾಜನಗರ: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ದಾಳಿಯ ಭೀತಿ ರೈತರನ್ನು ಕಂಗೆಡಿಸಿದೆ. ಬೆಳೆ ಕಟಾವಿಗಾಗಿ ಜಮೀನಿಗೆ ತೆರಳಲೂ ಭಯಪಡುತ್ತಿರುವ ಕೃಷಿಕರಿಗೆ ಅರಣ್ಯ ಇಲಾಖೆಯ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಾಗಿ ನಿಂತು ರಕ್ಷಣೆ ನೀಡುತ್ತಿದ್ದಾರೆ.  

ಕಲ್ಪುರ, ಹೆಗ್ಗೋಠಾರ, ಮೇಗಲಹುಂಡಿ, ಹಳೇಪುರ ಇನ್ನಿತರ ಗ್ರಾಮಗಳಲ್ಲಿ ಟೊಮೆಟೊ, ಬಾಳೆ ಸೇರಿ ತೋಟಗಾರಿಕಾ ಬೆಳೆಗಳ ಕಟಾವು ಕಾರ್ಯಕ್ಕಾಗಿ ಸಿಬ್ಭಂದಿ ರೈತರ ನೆರವಿಗೆ ಧಾವಿಸಿದ್ದಾರೆ. ಶಸ್ತ್ರಸಜ್ಜಿತ ಸಿಬ್ಬಂದಿ ಜಮೀನಿನ ಸುತ್ತಲೂ ಭದ್ರತೆಗೆ ನಿಂತಿದ್ದು, ರೈತರು ನಿರಾತಂಕವಾಗಿ ಕಟಾವು ಮಾಡುತ್ತಿದ್ದಾರೆ.  

‘ಕಟಾವು ಮಾಡುವ ಹಿಂದಿನ ದಿನ ಮಾಹಿತಿ ನೀಡಿದರೆ ಬೆಳಿಗ್ಗೆ ಕೂಲಿಯಾಳುಗಳು ಬರುವ ವೇಳೆಗೆ, ಹೊಲಗಳಿಗೆ ಬರುವ ಸಿಬ್ಬಂದಿ, ಕಟಾವಾದ ಫಸಲನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಜೊತೆಗಿರುತ್ತಾರೆ’  ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಭೀತಿಗೆ ಕಾರಣ: 15 ದಿನದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕ ರಸ್ತೆಯಲ್ಲಿ ಮೂರು ಮರಿಗಳನ್ನು ಬಿಟ್ಟು ತಾಯಿ ಹುಲಿ ನಾಪತ್ತೆಯಾಗಿತ್ತು. ಮರಿಗಳನ್ನು ರಕ್ಷಿಸಿದ್ದ ಅರಣ್ಯಾಧಿಕಾರಿಗಳು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ, ತಾಯಿ ಹುಲಿಗಾಗಿ ಶೋಧ ಆರಂಭಿಸಿದ್ದರು.

ಥರ್ಮಲ್‌ ಡ್ರೋನ್‌, ಸಾಕಾನೆ, ಶ್ವಾನದಳ ಸಹಿತ ಸಿಬ್ಬಂದಿ 2 ವಾರಗಳಿಂದ ಶೋಧ ನಡೆಸಿದರೂ ತಾಯಿ ಹುಲಿ ಕಂಡುಬಂದಿರಲಿಲ್ಲ. ಇದು, ಗ್ರಾಮಗಳಲ್ಲಿ ಹುಲಿ ದಾಳಿ ಭೀತಿ ಮೂಡಿಸಿತ್ತು. ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ರೈತರು ಹೊಲಗಳಿಗೆ ತೆರಳುವುದನ್ನು ನಿಲ್ಲಿಸಿದ್ದರು.

‘ಕಟಾವಾಗದೇ ಕಷ್ಟಪಟ್ಟು ಬೆಳೆದಿದ್ದ ಬೆಳೆ ನಷ್ಟದ ಚಿಂತೆಯೂ ಕಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅರಣ್ಯಾಧಿಕಾರಿಗಳು ಕೃಷಿಕರ ನೆರವಿಗೆ ಬಂದಿದ್ದಾರೆ. ರೈತರೂ ಕೂಲಿಯಾಳುಗಳಿಗೆ ಧೈರ್ಯ ತುಂಬಿ ಕೆಲಸಕ್ಕೆ ಕರೆತರುತ್ತಿದ್ದಾರೆ’ ಎಂದು ಗ್ರಾಮದ ರೈತ ರಾಘವೇಂದ್ರ ತಿಳಿಸಿದರು.

ತಾತ್ಕಾಲಿಕ ಕ್ಯಾಂಪ್: ನಾಲ್ವರು ಸೋಲಿಗರು ಇರುವ 20 ಸಿಬ್ಬಂದಿಯ ತಂಡ ತಾಯಿ ಹುಲಿಯ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಪೂರಕವಾಗಿ ಕಲ್ಪುರ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ಕ್ಯಾಂಪ್‌ ಹಾಕಲಾಗಿದೆ. 

‘ಶ್ವಾನದಳ ನೆರವು ಪಡೆದಿದ್ದು, ಥರ್ಮಲ್ ಡ್ರೋನ್‌ ಬಳಸಲಾಗಿದೆ. ಬೋನು ಇರಿಸಲಾಗಿದೆ. ಹುಲಿ ಹೆಜ್ಜೆ ಜಾಡು ಗುರುತಿಸುತ್ತಿದ್ದು, ಹುಲಿ ನೆಲೆ ಪತ್ತೆಯಾದರೆ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಲಿದ್ದೇವೆ’ ಎಂದು ನೇತೃತ್ವ ವಹಿಸಿರುವ ಪುಣಜನೂರು ಎಸಿಎಫ್‌ ಮಂಜುನಾಥ್ ಮಾಹಿತಿ ನೀಡಿದರು.

ಒಂದು ಹುಲಿಮರಿ ಸಾವು

‘ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆಯಲ್ಲಿದ್ದ ಮೂರು ಮರಿಗಳಲ್ಲಿ ಒಂದು ಮೃತಪಟ್ಟಿದೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಮರಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಉಳಿದೆರಡು  ಆರೋಗ್ಯವಾಗಿವೆ’ ಎಂದು ಎಸಿಎಫ್‌ ಮಂಜುನಾಥ್ ತಿಳಿಸಿದರು.

ರೈತರು ಹೊಲಗಳಿಗೆ ತೆರಳಲೂ ಹೆದರುತ್ತಿದ್ದು. ಬೆಳೆ ಕಟಾವು ವೇಳೆ ರಕ್ಷಣೆ ನೀಡಲಾಗುತ್ತಿದೆ. ಕಾಡುಪ್ರಾಣಿಗಳಿಂದ ಜನರಿಗೆ ರಕ್ಷಣೆ ಕೊಡುವುದೂ ಇಲಾಖೆಯ ಕರ್ತವ್ಯ.
–ಮಂಜುನಾಥ್ ಪುಣಜನೂರು, ಎಸಿಎಫ್‌
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಲ್ಪುರ ಗ್ರಾಮದ ಸಮೀಪದ ಜಮೀನಿನಲ್ಲಿ ಟೊಮೆಟೊ ಕಟಾವು ಮಾಡಲು ರೈತರಿಗೆ ಭದ್ರತೆ ನೀಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.