ADVERTISEMENT

ಕಳಚದ ಸೋಲಿನ ಸರಪಳಿ: ಉತ್ತರ ಕನ್ನಡದ ಕಾಂಗ್ರೆಸ್‌ ನಾಯಕ ಭೀಮಣ್ಣಗೆ ಸರಣಿ ಸೋಲಿನ ಕಹಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 7:26 IST
Last Updated 14 ಡಿಸೆಂಬರ್ 2021, 7:26 IST
ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ   

ಬೆಂಗಳೂರು: ಶಿರಸಿ–ಸಿದ್ದಾಪುರ ವಿಧಾನಸಭೆ ಚುನಾವಣೆ, ಯಲ್ಲಾಪುರ ಉಪ ಚುನಾವಣೆ, ಲೋಕಸಭೆ ಚುನಾವಣೆ... ಹೀಗೆ ಹಲವು ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿರುವ ಉತ್ತರ ಕನ್ನಡ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಭೀಮಣ್ಣ ನಾಯ್ಕ ಸದ್ಯ ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಸೋತಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಗಣಪತಿ ಉಳ್ವೇಕರ್‌ ಸ್ಪರ್ಧಿಸಿದ್ದರು. ಒಟ್ಟು 2907 ಮತಗಳು ಚಲಾವಣೆಯಾಗಿದ್ದು, ಉಳ್ವೇಕರ್ 1514 ಮತಗಳನ್ನು ಗಳಿಸಿ ಗೆದ್ದರೆ, ಭೀಮಣ್ಣ ನಾಯ್ಕ 1331 ಮತಗಳನ್ನು ಪಡೆದು ಸೋತಿದ್ದಾರೆ.

ಕಾಂಗ್ರೆಸ್‍ನಿಂದ ಉತ್ತರ ಕನ್ನಡದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳಾಗಿದ್ದರು. ರವೀಂದ್ರ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ಸಾಯಿ ಗಾಂವಕರ ಇನ್ನಿತರರು ಈ ಸಂಬಂಧ ಕೆಪಿಸಿಸಿಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಪಕ್ಷದ ಟಿಕೆಟ್ ಪಡೆಯುವ ಸಲುವಾಗಿ ಹಲವು ಮುಖಂಡರನ್ನೂ ಭೇಟಿಯಾಗಿದ್ದರು. ಆದರೆ, ಅಂತಿಮವಾಗಿ ಭೀಮಣ್ಣ ನಾಯ್ಕ ಅವರಿಗೆ ಕಾಂಗ್ರೆಸ್‌ ಮತ್ತೊಂದು ಅವಕಾಶ ಕಲ್ಪಿಸಿತ್ತು. ಹೀಗಾದರೂ, ಅವರು ಸೋಲುವಂತಾಗಿದೆ.

ADVERTISEMENT

62 ವರ್ಷದ ಭೀಮಣ್ಣ ನಾಯ್ಕ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಹತ್ತಿರದ ಸಂಬಂಧಿಯೂ ಆಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದವರು. ಅಲ್ಪ ಅವಧಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಜಿಲ್ಲಾಮಟ್ಟದ ಪದಾಧಿಕಾರಿಯಾಗಿದ್ದರು. ಬಂಗಾರಪ್ಪ ಪಕ್ಷ ತೊರೆದು ಸಮಾಜವಾದಿ ಪಕ್ಷ ಕಟ್ಟುವ ವೇಳೆ ಅವರೊಂದಿಗೆ ಕೈಜೋಡಿಸಿ ಉತ್ತರ ಕನ್ನಡದಲ್ಲಿ ಆ ಪಕ್ಷವನ್ನೂ ಸಂಘಟಿಸಿದ್ದರು.

ಬದಲಾದ ಕಾಲಘಟ್ಟದಲ್ಲಿ ಮರಳಿ ಕಾಂಗ್ರೆಸ್ ಸೇರಿದ ಭೀಮಣ್ಣ ಸತತ ಹದಿನಾಲ್ಕು ವರ್ಷದಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧೆ ಮಾಡಿ ಸೋತಿರುವ ಭೀಮಣ್ಣ, ಎರಡು ವರ್ಷಗಳ ಹಿಂದೆ ಯಲ್ಲಾಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಆದರೆ ಅಲ್ಲಿಯೂ ಸೋಲಬೇಕಾಯಿತು. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ತೀರ ಪರಿಚಿತರೆನಿಸಿಕೊಂಡಿರುವ ಭೀಮಣ್ಣ ಒಮ್ಮೆ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದಾರೆ.

ಹಲವು ಚುನಾವಣೆಗಳನ್ನು ಎದುರಿಸಿರುವ ಭೀಮಣ್ಣ ಅವರು ಒಮ್ಮೆ ಮಾತ್ರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಗೆಲುವಿನ ಸವಿ ಉಂಡಿದ್ದಾರಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.