ಬಿ.ವೈ.ವಿಜಯೇಂದ್ರ
ಬೆಂಗಳೂರು: ‘ಕನ್ನಡದ ಪ್ರತಿಭಾವಂತ ನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿ ನಿರಂತರ ವಿವಾದದಲ್ಲಿ ಸಿಲುಕಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ವಿಷ್ಣುವರ್ಧನ್ ಸಮಾಧಿ ವಿಚಾರವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವಿಷ್ಣು ಅವರ ಹಾಗೂ ಹಿರಿಯ ನಟ ಟಿ.ಎನ್. ಬಾಲಕೃಷ್ಣ ಅವರ ಸಮಾಧಿ ಸ್ಥಳಗಳು ಸ್ಮಾರಕಗಳಾಗಿ ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ಶೀಘ್ರ ನಿರ್ಮಾಣವಾಗಲಿ. ಅರಣ್ಯ ಭೂಮಿ ಎಂದು ಸದ್ಯ ಅಭಿಮಾನ್ ಸ್ಟುಡಿಯೊ ಜಾಗವದನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಿರ್ಧಾರವು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮತ್ತೊಂದು ಗೊಂದಲವಾಗಿ ಮಾರ್ಪಡದಿರಲಿ. ಅಭಿಮಾನಿಗಳ ಮನಸ್ಸನ್ನು ಘಾಸಿಗೊಳಿಸದಂತೆ ಸರ್ಕಾರ ನಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
ನಟ ಟಿ.ಎನ್. ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೊಕ್ಕೆ ಮಂಜೂರು ಮಾಡಿದ್ದ, ನಟ ವಿಷ್ಣುವರ್ಧನ್ ಅವರ ಸಮಾಧಿ ತೆರವಿನಿಂದ ವಿವಾದಕ್ಕೆ ಗುರಿಯಾಗಿದ್ದ ಕೆಂಗೇರಿಯ ಅರಣ್ಯ ಭೂಮಿಯನ್ನು ವಾಪಸ್ ಪಡೆಯುವಂತೆ ಅರಣ್ಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
‘ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿ ಹಂಚಿಕೆ ಮಾಡಲಾಗಿದ್ದ ಅರಣ್ಯ ಪ್ರದೇಶದ 20 ಎಕರೆ ಭೂಮಿಯ ಮಂಜೂರಾತಿ ಆದೇಶ ರದ್ದುಪಡಿಸಬೇಕು. ಇದರ ಖಾತೆಯನ್ನು ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿಕೊಡಬೇಕು’ ಎಂದು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅರಣ್ಯ ಭೂಮಿಯ ವಿಚಾರದಲ್ಲಿ 2025ರ ಮೇ 15ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ನಿಗದಿತ ಉದ್ದೇಶ ಬಿಟ್ಟು ಮಾರಾಟ ಮಾಡಿರುವ ಭೂಮಿಯನ್ನು ಹಿಂದಕ್ಕೆ ಪಡೆಯಬೇಕು. 1995ರ ಟಿ.ಎನ್.ಗೋದವರ್ಮನ್ ತಿರುಮಲಪಾಡ್ ಹಾಗೂ ಕೇಂದ್ರ ಸರ್ಕಾರ, ಇತರರ ನಡುವಿನ ವ್ಯಾಜ್ಯ ಪ್ರಕರಣದ ತೀರ್ಪಿನ ಆದೇಶವನ್ನು ಆಧರಿಸಿ ಮಂಜೂರಾತಿ ರದ್ದು ಮಾಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಬೇಕು ಎಂದೂ ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.