ಅದಾನಿ ಸಮೂಹ, ಗೌತಮ್ ಅದಾನಿ
– ಪಿಟಿಐ ಚಿತ್ರಗಳು
ವಾಷಿಂಗ್ಟನ್/ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ಕಂಪನಿಗಳು ಗುಜರಾತ್‌ನಲ್ಲಿರುವ ಮುಂದ್ರಾ ಬಂದರಿನ ಮೂಲಕ ಇರಾನ್‌ನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಭಾರತಕ್ಕೆ ಆಮದು ಮಾಡಿಕೊಂಡಿವೆಯೇ ಎಂದು ಅಮೆರಿಕದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದಾಗಿ ‘ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಮಾಡಿದೆ.
ಅದಾನಿ ಎಂಟರ್‌ಪ್ರೈಸಸ್‌ಗೆ ಸರಕುಗಳನ್ನು ಸಾಗಿಸಲು ಬಳಸುವ ಹಲವಾರು ಎಲ್‌ಪಿಜಿ ಟ್ಯಾಂಕರ್‌ಗಳು ಮುಂದ್ರಾ ಬಂದರಿನಿಂದ ಗುಜರಾತ್‌ನ ಇತರ ಕಡೆಗಳಿಗೆ ಪ್ರಯಾಣಿಸಿರುವುದು ಕಂಡುಬಂದಿದ್ದು, ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಬಗ್ಗೆ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.
ಇರಾನ್‌ನ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳ ಎಲ್ಲ ರೀತಿಯ ಖರೀದಿಗಳನ್ನು ನಿಲ್ಲಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ ತಿಂಗಳಲ್ಲಿ ಹೇಳಿದ್ದರು. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಯಾವುದೇ ದೇಶ ಅಥವಾ ವ್ಯಕ್ತಿಯ ಮೇಲೆ ತಕ್ಷಣವೇ ನಿರ್ಬಂಧ ಹೇರಲಾಗುತ್ತದೆ ಎಂದು ಎಚ್ಚರಿಸಿದ್ದರು.
ಅಲ್ಲಗಳೆದ ಅದಾನಿ ಸಮೂಹ
‘ವಾಲ್ ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾಗಿರುವ ವರದಿಯನ್ನು ಅದಾನಿ ಸಮೂಹ ಅಲ್ಲಗಳೆದಿದ್ದು, ಇರಾನ್‌ನಿಂದ ಬರುವ ಯಾವುದೇ ಸರಕುಗಳನ್ನು ತನ್ನ ಬಂದರುಗಳು ನಿರ್ವಹಿಸುವುದಿಲ್ಲ ಎಂದು ಹೇಳಿದೆ.
‘ನಮ್ಮ ಯಾವುದೇ ಬಂದರುಗಳಲ್ಲೂ ಇರಾನ್‌ನಿಂದ ಬರುವ ಸರಕುಗಳನ್ನು ಇಳಿಸಲು ಅವಕಾಶ ನೀಡುವುದಿಲ್ಲ. ಇರಾನ್‌ನ ಬಂದರುಗಳಿಂದ ಪ್ರಯಾಣ ಆರಂಭಿಸುವ ಅಥವಾ ಇರಾನ್‌ನ ಧ್ವಜ ಹೊಂದಿರುವ ಹಡಗುಗಳಿಗೆ ಈ ನಿಯಮ ಅನ್ವಯಿಸುತ್ತದೆ. ಇರಾನ್‌ನ ವ್ಯಕ್ತಿಗಳ ಒಡೆತನದ ಹಡಗುಗಳನ್ನೂ ನಾವು ನಿರ್ವಹಿಸುವುದಿಲ್ಲ. ನಮ್ಮ ಎಲ್ಲ ಬಂದರುಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.