ADVERTISEMENT

ಅಮೆರಿಕದ ಸರಕುಗಳಿಗೆ ಸುಂಕ ಹೆಚ್ಚಿಸಿರುವುದನ್ನು ಭಾರತ ಹಿಂಪಡೆಯಬೇಕು: ಟ್ರಂಪ್

ಜಿ20 ಸಮಾವೇಶ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಹೇಳಿಕೆ

ಏಜೆನ್ಸೀಸ್
Published 27 ಜೂನ್ 2019, 5:24 IST
Last Updated 27 ಜೂನ್ 2019, 5:24 IST
   

ಒಸಾಕ (ಜಪಾನ್):ಅಮೆರಿಕದ ಸರಕುಗಳಿಗೆ ಸುಂಕ ಹೆಚ್ಚಿಸಿರುವುದನ್ನು ಭಾರತ ಹಿಂಪಡೆಯಬೇಕು ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.

ಜಪಾನ್‌ನಲ್ಲಿ ನಡೆಯಲಿರುವಜಿ20 ಸಮಾವೇಶದ ಸಂದರ್ಭ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ಸುಂಕ ಹೆಚ್ಚಳದ ವಿಚಾರ ಪ್ರಸ್ತಾಪಿಸುವುದಾಗಿ ಟ್ರಂಪ್ ಹೇಳಿದ್ದಾರೆ.

‘ಕೆಲವು ವರ್ಷಗಳಿಂದ ಭಾರತವು ಅಮೆರಿಕದ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿದೆ. ಈಚೆಗೆ ಸುಂಕವನ್ನು ಮತ್ತೂ ಹೆಚ್ಚಿಸಲಾಗಿದೆ. ಇದನ್ನು ಒಪ್ಪಲಾಗದು. ಸುಂಕ ಹೆಚ್ಚಳವನ್ನು ವಾಪಸ್ ಪಡೆಯಬೇಕು’ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಮೋಟಾರುಸೈಕಲ್‌ಗಳ ಮೇಲಿನ ಸುಂಕ ಹೆಚ್ಚಳದ ಬಗ್ಗೆಯೂ ಈಚೆಗೆ ಟ್ರಂಪ್ ವಿರೋಧ ವ್ಯಕ್ತ‍ಪಡಿಸಿದ್ದರು.

‘ಅಮೆರಿಕವು ಮೂರ್ಖ ರಾಷ್ಟ್ರವಲ್ಲ, ಹೆಚ್ಚು ಸಮಯ ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗದು. ಭಾರತವು ನಮ್ಮ ಉತ್ತಮ ಮಿತ್ರರಾಷ್ಟ್ರ. ಅವರು ನಮ್ಮಮೋಟಾರುಸೈಕಲ್‌ಗಳ ಮೇಲೆ ಶೇ 100ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ನಾವು ಅವರ ಸರಕುಗಳಿಗೆ ಸುಂಕ ವಿಧಿಸುತ್ತಿಲ್ಲ’ ಎಂದುಸಿಬಿಎಸ್‌ ನ್ಯೂಸ್‌ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಭಾರತವನ್ನು ‘ಸುಂಕಗಳ ರಾಜ’ ಎಂದೂ ಟ್ರಂಪ್ ಈಚೆಗೆ ಬಣ್ಣಿಸಿದ್ದರು.

ಅಮೆರಿಕದ 29 ಸರಕುಗಳ ಮೇಲೆ ಹೆಚ್ಚುವರಿ ಕಸ್ಟಮ್ಸ್‌ ಸುಂಕ ವಿಧಿಸಲು ಭಾರತ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಜೂನ್ 16ರಿಂದ ಇದು ಜಾರಿಗೆ ಬಂದಿದೆ.ಅಮೆರಿಕವು ಆದ್ಯತಾ ವ್ಯಾಪಾರ ಒಪ್ಪಂದದಡಿ (ಜಿಎಸ್‌ಪಿ) ಭಾರತಕ್ಕೆ ನೀಡಿದ್ದ ರಫ್ತು ಉತ್ತೇಜನಾ ಕೊಡುಗೆ ರದ್ದು ಮಾಡಲು ನಿರ್ಧರಿಸಿದ್ದರಿಂದ ಭಾರತವೂ ಪ್ರತೀಕಾರ ಸುಂಕ ವಿಧಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.