ಷಿ ಜಿನ್‌ಪಿಂಗ್, ವ್ಲಾದಿಮಿರ್ ಪುಟಿನ್
(ರಾಯಿಟರ್ಸ್ ಚಿತ್ರ)
ತಿಯಾನ್‌ಜಿನ್: ‘ಬ್ರಿಕ್ಸ್’ ಸದಸ್ಯ ರಾಷ್ಟ್ರಗಳ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ರೀತಿಯ ‘ತಾರತಮ್ಯದ ನಿರ್ಬಂಧಗಳ’ನ್ನು ವಿರೋಧಿಸಿರುವ ರಷ್ಯಾ ಮತ್ತು ಚೀನಾ, ಇದರ ವಿರುದ್ಧ ಸಮಾನವಾದ ನಿಲುವು ತೆಗೆದುಕೊಳ್ಳುವುದಾಗಿ ಹೇಳಿವೆ.
‘ತಾರತಮ್ಯದ ನಿರ್ಬಂಧಗಳ’ ವಿರುದ್ಧ ಉಭಯ ದೇಶಗಳು ಒಮ್ಮತದ ನಿಲುವು ತೆಗೆದುಕೊಳ್ಳಲಿವೆ ಎಂದು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಸುದ್ದಿ ಸಂಸ್ಥೆ ಷಿನುವಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಬ್ರಿಕ್ಸ್’ ಸದಸ್ಯ ರಾಷ್ಟ್ರಗಳ ಮೇಲೆ ಶೇಕಡ 10ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆದರಿಕೆ ಹಾಕಿರುವ ಬೆನ್ನಲ್ಲೇ ಪುಟಿನ್ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.
ಸದ್ಯದ ಜಾಗತಿಕ ಸವಾಲುಗಳನ್ನು ಎದುರಿಸಲು ’ಬ್ರಿಕ್ಸ್’ ಸದಸ್ಯ ರಾಷ್ಟ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಚೀನಾ ಮತ್ತು ರಷ್ಯಾ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ಸುಧಾರಣೆಯನ್ನು ಉಭಯ ದೇಶಗಳು ಬೆಂಬಲಿಸುತ್ತವೆ ಎಂದು ಅವರು ಹೇಳಿದ್ದಾರೆ.
‘ಮುಕ್ತ ಮತ್ತು ನೈಜವಾದ ಸಮಾನತೆ’ಯ ತತ್ವಗಳ ಆಧಾರದಲ್ಲಿ ಹೊಸ ಹಣಕಾಸು ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಪುಟಿನ್ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.