
ನವದೆಹಲಿ: ಚೀನಾ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ನಾಲ್ಕನೇ ತಲೆಮಾರಿನ 20 ‘ಜೆ–10ಸಿ’ ಯುದ್ಧ ವಿಮಾನಗಳನ್ನು ಪೂರೈಸಿದೆ. ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನೂ 16 ಯುದ್ಧ ವಿಮಾನಗಳನ್ನು ಪೂರೈಸಲಿದೆ ಎಂದು ಪೆಂಟಗನ್ ವರದಿ ತಿಳಿಸಿದೆ.
‘ಚೀನಾ ಒಳಗೊಂಡ ವಿವಿಧ ದೇಶಗಳ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ’ ಕುರಿತ ವರದಿಯನ್ನು ಪೆಂಟಗನ್ ಈಚೆಗೆ ಬಿಡುಗಡೆ ಮಾಡಿದೆ. ಚೀನಾ ಕಳೆದ ಐದು ವರ್ಷಗಳಲ್ಲಿ ಈ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಮಾತ್ರ ರಫ್ತು ಮಾಡಿದೆ ಎಂದು ವರದಿ ಹೇಳಿದೆ.
ಚೀನಾದ ಸೇನೆ ಪಿಎಲ್‌ಎ (ಪೀಪಲ್ಸ್ ಲಿಬರೇಷನ್ ಆರ್ಮಿ) ತನ್ನ ವಾಯು ಮತ್ತು ನೌಕಾಪಡೆಗಳ ಬಲ ವೃದ್ಧಿಸಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಏಷ್ಯಾ ಹಾಗೂ ಆಫ್ರಿಕಾದ ಇನ್ನಷ್ಟು ದೇಶಗಳಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ ಎಂದಿದೆ.
‘ಅಂಗೋಲಾ, ಬರ್ಮಾ, ಕ್ಯೂಬಾ, ಈಕ್ವಟೋರಿಯಲ್ ಗಿನಿಯಾ, ಇಂಡೊನೇಷ್ಯಾ, ಕೆನ್ಯಾ, ಮೊಜಾಂಬಿಕ್, ನಮೀಬಿಯಾ, ನೈಜೀರಿಯಾ, ಪಪುವಾ ನ್ಯೂಗಿನಿ, ಸೀಷೆಲ್ಸ್, ಸೊಲೊಮನ್ ಐಲ್ಯಾಂಡ್ಸ್, ಶ್ರೀಲಂಕಾ, ತಜಿಕಿಸ್ತಾನ, ಥಾಯ್ಲೆಂಡ್, ತಾಂಜಾನಿಯಾ, ಯುಎಇ ಮತ್ತು ವನುವಾಟು ದೇಶಗಳಲ್ಲಿ ಸೇನಾ ನೆಲೆ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ’ ಎಂಬ ಅಂಶ ವರದಿಯಲ್ಲಿದೆ.
ಚೀನಾದಿಂದ 25 ‘ಜೆ–10ಸಿ’ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಪಾಕಿಸ್ತಾನವು 2021ರ ಡಿಸೆಂಬರ್‌ನಲ್ಲಿ ಹೇಳಿತ್ತು. ಭಾರತವು ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ ಐದು ವರ್ಷಗಳ ಬಳಿಕ ಪಾಕ್ ಈ ನಿರ್ಧಾರ ತೆಗೆದುಕೊಂಡಿತ್ತು. ಭಾರತದ ಜತೆ ಈಚೆಗೆ ನಡೆದ ಸಂಘರ್ಷದ ವೇಳೆ ಪಾಕಿಸ್ತಾನವು ‘ಜೆ–10ಸಿ’ ಯುದ್ಧ ವಿಮಾನಗಳನ್ನು ಬಳಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.