ADVERTISEMENT

ಸುಂಕ ವಿಧಿಸಲು ಜಿ7, ನ್ಯಾಟೊ ದೇಶಗಳಿಗೆ ಅಮೆರಿಕ ಕರೆ: ಬೆದರಿಕೆ ಕ್ರಮ ಎಂದ ಚೀನಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 13:28 IST
Last Updated 15 ಸೆಪ್ಟೆಂಬರ್ 2025, 13:28 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ಬೀಜಿಂಗ್: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ವಿರುದ್ಧ ಸುಂಕ ವಿಧಿಸುವಂತೆ ಜಿ7 ಮತ್ತು ನ್ಯಾಟೊ ದೇಶಗಳಿಗೆ ಅಮೆರಿಕ ಕರೆ ನೀಡಿರುವುದನ್ನು ಚೀನಾ ಖಂಡಿಸಿದೆ.

ಅಮೆರಿಕದ ನಿಲುವನ್ನು ‘ಏಕಪಕ್ಷೀಯ ಬೆದರಿಕೆ’ ಎಂದು ಚೀನಾ ಸೋಮವಾರ ಬಣ್ಣಿಸಿದ್ದು, ‘ವಾಷಿಂಗ್ಟನ್‌ನ ಕರೆಗೆ ಮಣಿದು ಸುಂಕ ಹೇರಿದರೆ ಪ್ರತಿಸುಂಕ ಹಾಕಲಾಗುವುದು’ ಎಂದು ಎಚ್ಚರಿಸಿದೆ.

ADVERTISEMENT

ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಚೀನಾ ಹಾಗೂ ಅಮೆರಿಕದ ನಿಯೋಗಗಳು ಸೋಮವಾರ ಸ್ಪೇನ್‌ನಲ್ಲಿ ಎರಡನೇ ಸುತ್ತಿನ ಸಭೆ ನಡೆಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

‘ರಷ್ಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳೊಂದಿಗೆ ಚೀನಾದ ಆರ್ಥಿಕ ಮತ್ತು ಇಂಧನ ಸಹಕಾರವು ಕಾನೂನುಬದ್ಧವಾಗಿಯೇ ಇದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌ ಹೇಳಿದ್ದಾರೆ.

ಚೀನಾ ಸೇರಿದಂತೆ ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ವಿರುದ್ಧ ಹೆಚ್ಚಿನ ಸುಂಕ ವಿಧಿಸುವಂತೆ ಅಮೆರಿಕವು ಈಚೆಗೆ ತನ್ನ ಮಿತ್ರ ರಾಷ್ಟ್ರಗಳಿಗೆ ಕರೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಅಮೆರಿಕದ ಬಲವಂತದ ಕ್ರಮವು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳ ಉಲ್ಲಂಘನೆಯಾಗಿದೆ. ಜಾಗತಿಕ ಆಮದು ಮತ್ತು ರಫ್ತು ಪ್ರಕ್ರಿಯೆಯ ಸುರಕ್ಷತೆ ಹಾಗೂ ಸ್ಥಿರತೆಗೆ ಬೆದರಿಕೆ ಉಂಟುಮಾಡಿದೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.