ADVERTISEMENT

ಖಮೇನಿ ಹತ್ಯೆ: ಅಮೆರಿಕದ ಸಿಐಎ ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಆಧರಿಸಿ ದಾಳಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 18:57 IST
Last Updated 1 ಮಾರ್ಚ್ 2026, 18:57 IST
<div class="paragraphs"><p>ಅಯಾತೊಲ್ಲಾ ಅಲಿ ಖಮೇನಿ</p></div>

ಅಯಾತೊಲ್ಲಾ ಅಲಿ ಖಮೇನಿ

   

ವಾಷಿಂಗ್ಟನ್‌: ಅಮೆರಿಕದ ಸಿಐಎ ಗುಪ್ತಚರ ಇಲಾಖೆಯು ಅಯತೊಲ್ಲಾ ಖಮೇನಿ ಅವರ ಚಲನವಲನ ಕುರಿತು ನೀಡಿದ ಸುಳಿವು ನಿಖರವಾದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡುವುದಕ್ಕೆ ಅಮೆರಿಕ ಹಾಗೂ ಇಸ್ರೇಲ್‌ಗೆ ನೆರವಾಯಿತು ಎಂದು ನ್ಯೂಯಾರ್ಕ್‌ ಟೈಮ್ಸ್‌ ಭಾನುವಾರ ವರದಿ ಮಾಡಿದೆ. ‘ಕಳೆದ ಹಲವು ತಿಂಗಳಿನಿಂದ ಖಮೇನಿ ಅವರ ಮೇಲೆ ಸಿಐಎ ಕಣ್ಣಿಟ್ಟಿತ್ತು.

ಟೆಹರಾನ್‌ ಹೃದಯಭಾಗದಲ್ಲಿರುವ ತಮ್ಮ ನಿವಾಸದಲ್ಲಿ ಖಮೇನಿ ಇರಾನ್‌ನ ಉನ್ನತ ಅಧಿಕಾರಿಗಳೊಂದಿಗೆ ಶನಿವಾರ ಬೆಳಿಗ್ಗೆ ಸಭೆ ನಡೆಸುವ ಬಗ್ಗೆ ಸಿಐಎ ಮಾಹಿತಿ ಸಂಗ್ರಹಿಸಿ ರವಾನಿಸಿತ್ತು. ಇದರ ಆಧಾರದಲ್ಲಿಯೇ ಅಮೆರಿಕ ಹಾಗೂ ಇಸ್ರೇಲ್‌ ನಿಖರ ದಾಳಿ ನಡೆಸಿದವು’ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

ADVERTISEMENT

‘ರಾತ್ರಿ ಹೊತ್ತಿನಲ್ಲಿ ಇರಾನ್‌ ಮೇಲೆ ದಾಳಿ ನಡೆಸುವುದಕ್ಕೆ ಅಮೆರಿಕ ಹಾಗೂ ಇಸ್ರೇಲ್‌ ಯೋಜಿಸಿದ್ದವು. ಆದರೆ ಸಿಐಎ ಇಂಟೆಲಿಜೆನ್ಸ್‌ ನೀಡಿದ ಮಾಹಿತಿ ಪರಿಗಣಿಸಿ ಅವು ತಮ್ಮ ಯೋಜನೆ ಬದಲಿಸಿದವು’ ಎಂದೂ ಪತ್ರಿಕೆ ವರದಿ ಮಾಡಿದೆ.

‘ಸಿಐಎ ಹಂಚಿಕೊಂಡಿದ್ದ ಮಾಹಿತಿಯನ್ನು ಅಮೆರಿಕವು ಇಸ್ರೇಲ್‌ಗೆ ನೀಡಿತು. ಇದನ್ನು ಆಧರಿಸಿ ಶನಿವಾರ ಬೆಳಿಗ್ಗೆ 6ಕ್ಕೆ (ಸ್ಥಳೀಯ ಕಾಲಮಾನ 4 ಗಂಟೆ) ಇಸ್ರೇಲ್‌ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಬೆಳಿಗ್ಗೆ 9.40ರ ಹೊತ್ತಿಗೆ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿಂದ ದಾಳಿ ನಡೆಸಿ ಖಮೇನಿ ಹತ್ಯೆ ಮಾಡಿದವು’ ಎಂದೂ ವರದಿ ಮಾಡಿದೆ.

‘ಇಸ್ಲಾಮಿಕ್‌ ರಿಪಬ್ಲಿಕ್‌’ ಅಂತ್ಯ: ಪಹ್ಲವಿ

ಅಯಾತೊಲ್ಲಾ ಖಮೇನಿ ಹತ್ಯೆಯನ್ನು ಇರಾನ್ (ಈ ಹಿಂದಿನ ಪರ್ಷಿಯಾ) ರಾಜರಾಗಿದ್ದ ಮೊಹಮ್ಮದ್ ರೆಝಾ ಪಹ್ಲವಿ ಪುತ್ರ ರೆಜಾ ಪಹ್ಲವಿ ಸ್ವಾಗತಿಸಿದ್ದಾರೆ.

‘ಖಮೇನಿ ಹತ್ಯೆಯೊಂದಿಗೆ ಇಸ್ಲಾಮಿಕ್ ರಿಪಬ್ಲಿಕ್‌ ಅಂತ್ಯವಾದಂತಾಗಿದೆ. ಖಮೇನಿ ಆಳ್ವಿಕೆಯ ದಿನಗಳು ಶೀಘ್ರವೇ ಇತಿಹಾಸ ಸೇರಲಿವೆ’ ಎಂದಿದ್ದಾರೆ.

ದೇಶಭ್ರಷ್ಟರಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ರೆಝಾ, ‘ಅಲ್ಲಿನ ಪ್ರಸ್ತುತ ವ್ಯವಸ್ಥೆಯ ಭಾಗವಾಗಿರುವ ವ್ಯಕ್ತಿಯನ್ನೇ ಖಮೇನಿ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದಲ್ಲಿ ಅದು ಕಾನೂನುಬಾಹಿರ ಆಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.