ADVERTISEMENT

'ರಸ್ತೆಗಿಳಿದು ಪ್ರತಿಭಟಿಸಿ'-ಜಾಗತಿಕ ಪ್ರತಿಭಟನೆಗೆ ಉಕ್ರೇನ್‌ನ ಝೆಲೆನ್‌ಸ್ಕಿ ಕರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2022, 2:53 IST
Last Updated 24 ಮಾರ್ಚ್ 2022, 2:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ವಿಶ್ವದ ಎಲ್ಲ ಜನರನ್ನೂ ಕೋರಿದ್ದಾರೆ.

'ಉಕ್ರೇನ್‌ನ ಲಾಂಛನಗಳೊಂದಿಗೆ ಬಂದು ಉಕ್ರೇನ್‌ಗೆ ನಿಮ್ಮ ಬೆಂಬಲ ತೋರಿ. ಸ್ವಾತಂತ್ರ್ಯಕ್ಕೆ ಮತ್ತು ಬದುಕಿಗಾಗಿ ಬೆಂಬಲಿಸಿ...' ಎಂದು ಝೆಲೆನ್‌ಸ್ಕಿ ವಿಡಿಯೊ ಸಂದೇಶದಲ್ಲಿ ಕರೆ ನೀಡಿದ್ದಾರೆ.

'ನೀವು ನಿಮ್ಮ ರಸ್ತೆಗಳಿಗೆ ಇಳಿಯಿರಿ, ವೃತ್ತಗಳಲ್ಲಿ ಸೇರಿರಿ, ಸ್ವತಃ ನೀವು ಕಾಣಿಸಿಕೊಳ್ಳಿ ಹಾಗೂ ಕೇಳಿಸಿಸುವಂತಾಗಲಿ' ಎಂದಿದ್ದಾರೆ.

ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಒಂದು ತಿಂಗಳು ಕಳೆದಿರುವ ಸಂದರ್ಭದಲ್ಲಿ ಇಡೀ ಜಗತ್ತಿನ ಜನರನ್ನು ಉದ್ದೇಶಿಸಿ ಝೆಲೆನ್‌ಸ್ಕಿ ಮಾತನಾಡಿದ್ದಾರೆ. 'ರಷ್ಯಾ ಆರಂಭಿಸಿರುವ ಯುದ್ಧದ ವಿರುದ್ಧ ಎಲ್ಲರೂ ಮಾತನಾಡಿ, ಮಾರ್ಚ್‌ 24ರಿಂದಲೇ ಇದು ಆರಂಭವಾಗಲಿ...' ಎಂದು ಕೇಳಿದ್ದಾರೆ.

'ನಿಮ್ಮ ಕಚೇರಿಗಳಿಂದ, ನಿಮ್ಮ ಮನೆಗಳಿಂದ, ನಿಮ್ಮ ಶಾಲೆಗಳಿಂದ ಹಾಗೂ ನಿಮ್ಮ ವಿಶ್ವವಿದ್ಯಾಲಯಗಳಿಂದ ಹೊರ ಬಂದು ನಿಲ್ಲಿ....ಶಾಂತಿಯ ಹೆಸರಿನಲ್ಲಿ ನಿಲ್ಲಿ,...' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ಫೆಬ್ರುವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‌ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.

ರಷ್ಯಾದಿಂದ ಅಣ್ವಸ್ತ್ರದ ಎಚ್ಚರಿಕೆ

ಯಾವುದೇ ರಾಷ್ಟ್ರದಿಂದ ಬೆದರಿಕೆ ಎದುರಾದರೆ ಆ ರಾಷ್ಟ್ರದ ವಿರುದ್ಧ ಅಣ್ವಸ್ತ್ರ ಬಳಸದೇ ಇರಲಾಗದು ಎಂದು ರಷ್ಯಾವು ಉಕ್ರೇನ್‌ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಬುಧವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಅಲ್ಲದೆ, ಶಾಂತಿ ಮಾತುಕತೆಯನ್ನು ಅಮೆರಿಕ ದುರ್ಬಲಗೊಳಿಸುತ್ತಿದೆ ಎಂದು ಅದು ವಾಗ್ದಾಳಿ ನಡೆಸಿದೆ.

ರಷ್ಯಾ ಪಡೆಗಳು ಪ್ರಮುಖ ಕಾರ್ಯತಂತ್ರದ ಬಂದರು ನಗರ ಮರಿಯುಪೊಲ್‌ ಮೇಲೆ ಬುಧವಾರ ಕೂಡ ನಿರಂತರ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿವೆ. ಈ ನಗರದಲ್ಲಿ ಸಿಲುಕಿಕೊಂಡಿರುವ ಸುಮಾರು ಒಂದು ಲಕ್ಷ ಜನರು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಹಲವು ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.