ADVERTISEMENT

ಮಕ್ಕಳ ಪ್ರಾಣ ಕಸಿಯುತ್ತಿದೆಯೇ ಕೆಮ್ಮಿನ ಔಷಧ?: ಆಫ್ರಿಕಾದಲ್ಲೂ ಭಾರತದ ಸಿರಪ್‌ ಕಂಟಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2025, 13:14 IST
Last Updated 4 ಅಕ್ಟೋಬರ್ 2025, 13:14 IST
<div class="paragraphs"><p>ಕೆಮ್ಮಿನ ಸಿರಪ್‌</p></div>

ಕೆಮ್ಮಿನ ಸಿರಪ್‌

   

ಪಿಟಿಐ ಚಿತ್ರ

ಬೆಂಗಳೂರು: ಡೈಇಥಲೀನ್‌ ಗ್ಲೈಕೋಲ್‌ ಮತ್ತು ಎಥಿಲಿನ್ ಗ್ಲೈಕಾಲ್‌ ಎಂಬ ರಾಸಾಯನಿಕವನ್ನು ಅನುಮತಿಸಿದ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿರುವ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವಿಗೆ ಕಾರಣವಾಗಿವೆ.

ADVERTISEMENT

ಇದು ಇಲ್ಲಿ ಮಾತ್ರವಲ್ಲ, ಭಾರತದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ಗಳು ಆಫ್ರಿಕಾ ಸಹಿತ ಹಲವು ರಾಷ್ಟ್ರಗಳಲ್ಲೂ ಇಂಥ ಕರಾಳ ಪರಿಸ್ಥಿತಿ ಸೃಷ್ಟಿಸಿದ ಪ್ರಕರಣಗಳು ದಾಖಲಾಗಿವೆ.

ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್‌ ಸೇವನೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾದ 'ಕೋಲ್ಡ್‌ರಿಫ್‌' ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿ ತಮಿಳುನಾಡು, ಕೇರಳ ಸರ್ಕಾರಗಳು ಆದೇಶಿಸಿವೆ.

ಡಿಇಜಿ ಎಂಬುದು ವಿಷಕಾರಿಯಾದ ದ್ರಾವಣವಾಗಿದ್ದು, ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ ಸಂಭವಿಸಿದ ಸಾವುಗಳಿಗೆ ಈ ದ್ರಾವಣ ಕಾರಣ ಎನ್ನಲಾಗುತ್ತಿದೆ. ಮಧ್ಯಪ್ರದೇಶದ ಛಿಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ, 9 ಶಿಶುಗಳು ಮೃತಪಟ್ಟಿದ್ದವು. ಈ ಸಾವುಗಳಿಗೆ ಕೆಮ್ಮಿನ ಸಿರಪ್‌ ಸೇವನೆಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಸಚಿವಾಲಯ ತನಿಖೆಗೆ ಮುಂದಾಗಿದೆ.

ಆರು ರಾಜ್ಯಗಳಲ್ಲಿರುವ 19 ಔಷಧ ತಯಾರಿಕೆ ಘಟಕಗಳಲ್ಲಿನ ಉತ್ಪಾದನೆಯಾಗುತ್ತಿರುವ ಕೆಮ್ಮಿನ ಸಿರಪ್‌ ಹಾಗೂ ಆ್ಯಂಟಿಬಯೊಟಿಕ್‌ ಸೇರಿ ಇತರ ಔಷಧಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಚಾಲನೆ ನೀಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ವೈರಾಣು ಸಂಸ್ಥೆ(ಎನ್‌ಐವಿ), ಐಸಿಎಂಆರ್‌, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಹಾಗೂ ಎಐಐಎಂಎಸ್‌–ನಾಗ್ಪುರದ ತಜ್ಞರನ್ನು ಒಳಗೊಂಡ ತಂಡವು, ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ನ ಮಾದರಿಗಳ ವಿಶ್ಲೇಷಣೆ ಕೈಗೊಂಡಿದೆ.

ಆದರೆ ಭಾರತದಲ್ಲಿ ತಯಾರಾಗುವ ಇಂಥ ಅಪಾಯಕಾರಿ ಕೆಮ್ಮಿನ ಸಿರಪ್‌ಗಳ ಅವಾಂತರ ಘಟನೆ ಇದೇ ಮೊದಲಲ್ಲ. ಭಾರತದಿಂದ ಔಷಧಗಳನ್ನು ಆಮದು ಮಾಡಿಕೊಳ್ಳುವ ಆಫ್ರಿಕಾ ಖಂಡದ ಹಲವು ದೇಶಗಳು ಭಾರತದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ಗಳ ಮೇಲೆ ನಿಷೇಧ ಹೇರಿವೆ. ಈ ಸಿರಪ್‌ ಸೇವಿಸಿದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಳವಾದ ಪರಿಣಾಮ ಗಾಂಬಿಯಾ, ಉಜ್ಬೇಕಿಸ್ತಾನ್, ಇರಾಕ್‌ ಕೂಡಾ ಕೆಮ್ಮಿನ ಸಿರಪ್‌ಗಳನ್ನು ಭಾರತಕ್ಕೆ ಮರಳಿಸಿವೆ. ಆಫ್ರಿಕಾದಲ್ಲಂತೂ ನಿಷೇಧವನ್ನೇ ಹೇರಲಾಗಿದೆ.

ಮೇಡೆನ್ ಫಾರ್ಮಾಸ್ಯೂಟಿಕಲ್ ಎಂಬ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್‌ನಿಂದಾಗಿ 2022ರ ಅಕ್ಟೋಬರ್‌ನಲ್ಲಿ ಗಾಂಬಿಯಾದಲ್ಲಿ 70ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದವು. ಭಾರತದಿಂದ ಆಮದಾಗಿರುವ ಈ ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಕೊಫೆಕ್ಸ್‌ಮಲಿನ್‌ ಬೇಬಿ ಕಾಫ್ ಸಿರಪ್‌, ಮೇಕಾಫ್‌ ಕೆಮ್ಮಿನ ಸಿರಪ್‌, ಮ್ಯಾಗ್‌ರಿಪ್‌ ಎನ್‌ ಕೋಲ್ಡ್ ಸಿರಪ್‌ ಮೇಲೆ ನಿಷೇಧ ಹೇರಲಾಗಿತ್ತು.‌ ಕ್ಯಾಮರೂನ್‌ನಲ್ಲೂ ಇಂಥದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಭಾರತದ ನಿರ್ದಿಷ್ಟ ಔಷಧ ಕಂಪನಿಗಳನ್ನು ಆ ರಾಷ್ಟ್ರಗಳು ನಿಷೇಧಿಸಿದವು.

ಮಕ್ಕಳನ್ನು ಕಳೆದುಕೊಂಡ ಗಾಂಬಿಯಾದ ಪಾಲಕರು ಮೇಡೆನ್ ಫಾರ್ಮಾಸ್ಯೂಟಿಕಲ್ಸ್‌ ಮತ್ತು ಸ್ಥಳೀಯ ಪ್ರಾಧಿಕಾರದ ಮೇಲೆ ಮೊಕದ್ದಮೆ ಹೂಡಿವೆ. ಪ್ರತಿ ಮಗುವಿನ ಪಾಲಕರಿಗೆ ₹2 ಕೋಟಿ ಪರಿಹಾರ ಕೋರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.