ADVERTISEMENT

ಕೋವಿಡ್‌ ಲಸಿಕೆ ಸಿದ್ಧವಿದೆ, ಕೆಲವೇ ವಾರಗಳಲ್ಲಿ ದೊರೆಯಲಿದೆ: ಟ್ರಂಪ್

ಪಿಟಿಐ
Published 23 ಅಕ್ಟೋಬರ್ 2020, 4:05 IST
Last Updated 23 ಅಕ್ಟೋಬರ್ 2020, 4:05 IST
ಸಂವಾದದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಜೊ ಬೈಡನ್‌ –ರಾಯಿಟರ್ಸ್‌ ಚಿತ್ರ
ಸಂವಾದದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಜೊ ಬೈಡನ್‌ –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌: ‘ಕೋವಿಡ್‌ ಲಸಿಕೆ ಸಿದ್ಧವಾಗಿದ್ದು, ಕೆಲವೇ ವಾರಗಳಲ್ಲಿ ಜನರಿಗೆ ಲಭ್ಯವಾಗಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿ ನ್ಯಾಶ್‌ವಿಲ್ಲೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೊ ಬೈಡನ್‌ ಜತೆ ನಡೆದ ಎರಡನೇ ಮತ್ತು ಕೊನೆಯ ಸಂವಾದದಲ್ಲಿ ಡೊನಾಲ್ಡ್‌ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

ನವೆಂಬರ್‌ 3ರಂದು ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

ADVERTISEMENT

ಚರ್ಚೆಯಲ್ಲಿ ಕೊರೊನಾ ವೈರಸ್‌ ನಿಯಂತ್ರಣದ ಬಗ್ಗೆ ಮಾತನಾಡಿದ ಟ್ರಂಪ್‌, ‘ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಜಾಗತಿಕ ಸಮಸ್ಯೆಯಾಗಿದೆ. ಆದರೆ ಸೋಂಕು ನಿಯಂತ್ರಣಕ್ಕೆ ನಾವು ಏನು ಮಾಡಲು ಸಾಧ್ಯವಾಯಿತು ಎಂಬುದರ ಬಗ್ಗೆ ಅನೇಕ ದೇಶಗಳು ನನ್ನನ್ನು ಅಭಿನಂದಿಸಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮಲ್ಲಿ ಕೋವಿಡ್‌ ಲಸಿಕೆ ಸಿದ್ಧವಾಗಿದೆ. ಇದನ್ನು ಕೆಲವೇ ವಾರಗಳಲ್ಲಿ ಜನರ ಬಳಕೆಗೆ ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂದ ಟ್ರಂಪ್‌, ಜನರು ಕೋವಿಡ್‌ ಜತೆಗೆ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜೊ ಬೈಡನ್‌, ‘ಟ್ರಂಪ್‌ ಹೇಳಿಕೆಗಳಿಂದ ಯಾವುದೇ ಪ್ರಯೋಜನೆ ಇಲ್ಲ’ ಎಂದು ಹೇಳಿದರು.

‘ಟ್ರಂಪ್‌ ಜನರಿಗೆ ಕೋವಿಡ್‌ ಜತೆಗೆ ಬದುಕಲು ಕಲಿಯುವಂತೆ ಹೇಳುತ್ತಾರೆ. ಆದರೆ ಜನ ಸೋಂಕಿನೊಂದಿಗೆ ಸಾಯುವುದನ್ನು ಕಲಿಯುತ್ತಿದ್ದಾರೆ’ ಎಂದು ಬೈಡನ್ ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌ ಸಮಸ್ಯೆಯನ್ನು ನಾನು ಸಮರ್ಥವಾಗಿ ಎದುರಿಸುತ್ತೇನೆ. ನಮ್ಮಲ್ಲಿ ಸೂಕ್ತ ಯೋಜನೆ ಇದೆ ಎಂದು ನಾನು ಖಚಿತಪಡಿಸುತ್ತೇನೆ’ ಎಂದು ಹೇಳಿದರು.

ಇದೇ ವೇಳೆ ದೇಶದಲ್ಲಿ ಶೀಘ್ರ ಶಾಲಾ–ಕಾಲೇಜುಗಳನ್ನು ತೆರೆಯಲು ತಿರ್ಮಾನಿಸಲಾಗುತ್ತದೆ ಎಂದು ಟ್ರಂಪ್‌ ಹೇಳಿದರು.

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ದತ್ತಾಂಶ ಪ್ರಕಾರ, ಅಮೆರಿಕದಲ್ಲಿ ಇದುವರೆಗೆ 84,04,743 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಆಪೈಕಿ 2,23,000 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.