ಟೆಸ್ಲಾ ಕಾರು ಖರೀದಿಸಿದ ಡೊನಾಲ್ಡ್ ಟ್ರಂಪ್. ಎಲಾನ್ ಮಸ್ಕ್ ಜೊತೆಗಿದ್ದರು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಚ್ಚ ಹೊಸ, ಕೆಂಪು ವರ್ಣದ ಟೆಸ್ಲಾ ಕಾರು ಖರೀದಿಸಿದ್ದಾರೆ. ಆ ಮೂಲಕ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರನ್ನು ಬೆಂಬಲಿಸಿದ್ದಾರೆ. ಈ ಸಂದರ್ಭದಲ್ಲಿ ಎಲಾನ್ ಮಸ್ಕ್ ಸಹ ಜೊತೆಗಿದ್ದರು.
ಭಾರಿ ಪ್ರತಿಭಟನೆಯಿಂದಾಗಿ ಟೆಸ್ಲಾ ಕಂಪನಿಯ ಷೇರು ಬೆಲೆ ಏಕಾಏಕಿ ಕುಸಿತ ಕಂಡಿತ್ತು. ಈ ನಡುವೆ ಟೆಸ್ಲಾ ಕಾರನ್ನು ಖರೀದಿಸುವ ಮೂಲಕ ಟ್ರಂಪ್ ಉತ್ತೇಜನ ತುಂಬುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಲಾನ್ ಮಸ್ಕ್ ಅವರ ಕುರಿತು ಹೊಗಳಿಕೆಯ ಮಾತುಗಳನ್ನಾಡಿರುವ ಟ್ರಂಪ್, 'ಮೊದಲನೇಯದಾಗಿ ಟೆಸ್ಲಾ ಅತ್ಯುತ್ತಮ ಉತ್ಪನ್ನವಾಗಿದೆ. ಎರಡನೇಯದಾಗಿ ಮಸ್ಕ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ ಅವರ ವಿರುದ್ಧ ಅನ್ಯಾಯವಾಗಿದೆ' ಎಂದು ಹೇಳಿದ್ದಾರೆ.
'ಯಾವತ್ತೂ ಅವರು ನನ್ನಿಂದ ಏನನ್ನೂ ಬಯಸಿಲ್ಲ. ಇಷ್ಟು ದೊಡ್ಡ ಕಂಪನಿ ನಿರ್ಮಿಸಿದ್ದಾರೆ. ದೇಶಪ್ರೇಮಿ ಅಂದ ಮಾತ್ರಕ್ಕೆ ಅವರಿಗೆ ಅನ್ಯಾಯವಾಗಬಾರದು' ಎಂದು ಅವರು ಉಲ್ಲೇಖಿಸಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅತ್ಯುತ್ತಮ ನೀತಿ ಹಾಗೂ ಅಮೆರಿಕದ ಮೇಲಿನ ನಂಬಿಕೆಯ ಭಾಗವಾಗಿ ಟೆಸ್ಲಾ ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ವಾಹನ ಉತ್ಪಾದನೆಯನ್ನು ದ್ವಿಗುಣಗೊಳಿಸಲಿದೆ' ಎಂದು ಪ್ರಕಟಿಸಿದ್ದಾರೆ.
2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉಸ್ತುವಾರಿಯಾಗಿ ನೇಮಿಸಿದ್ದರು.
ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿದೆ. ಟ್ರಂಪ್ ಅವರ ನಿರ್ದೇಶನದಂತೆ ಸರ್ಕಾರಿ ನೌಕರರನ್ನು ಕಡಿತಗೊಳಿಸುವ ಎಲಾನ್ ಮಸ್ಕ್ ಅವರ ಪಾತ್ರವನ್ನು ವಿರೋಧಿಸಿ ಟೆಸ್ಲಾ ಕಂಪನಿಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.