
ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ನ್ಯೂಯಾರ್ಕ್/ವಾಷಿಂಗ್ಟನ್: 'ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಿಲ್ಲಿಸದಿದ್ದರೆ ಶೇ 200ರಷ್ಟು ಸುಂಕ ಹೇರುವುದಾಗಿ ಬೆದರಿಕೆ ಹಾಕಿದ್ದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪರಮಾಣು ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ 'ಶಾಂತಿ ಮಂಡಳಿ' ಸಭೆ ಉದ್ದೇಶಿಸಿ ಮಾತನಾಡಿದ ಟ್ರಂಪ್, 'ಎರಡನೇ ಅವಧಿಯಲ್ಲಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಉಪಸ್ಥಿತರಿದ್ದರು.
ಷರೀಫ್ ಅವರನ್ನು ಎದ್ದು ನಿಲ್ಲುವಂತೆ ವಿನಂತಿಸಿದ ಟ್ರಂಪ್, 'ಭಾರತ ಹಾಗೂ ಪಾಕಿಸ್ತಾನಕ್ಕೆ ನಿಜಕ್ಕೂ ಧನ್ಯವಾದ. ನಾನು ಪ್ರಧಾನಿ ಮೋದಿ ಅವರೊಂದಿಗೂ ಮಾತನಾಡಿದ್ದೇನೆ. ಅವರು ಉತ್ಸುಕರಾಗಿದ್ದಾರೆ. ಈಗ ಇದನ್ನು ಗಮನಹರಿಸುತ್ತಾರೆ' ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕ್ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ಅವರನ್ನು ಟ್ರಂಪ್ ಹೊಗಳಿದ್ದಾರೆ. 'ಗ್ರೇಟ್ ಜನರಲ್, ಗ್ರೇಟ್ ಫೀಲ್ಡ್ ಮಾರ್ಷಲ್, ಒಳ್ಳೆಯ ವ್ಯಕ್ತಿ' ಎಂದು ಹೇಳಿದ್ದಾರೆ.
25 ಮಿಲಿಯನ್ ಜೀವಗಳನ್ನು ಉಳಿಸಿಕೊಳ್ಳಲಾಯಿತು ಎಂಬ ಷರೀಫ್ ಹೇಳಿಕೆಯನ್ನು ಟ್ರಂಪ್ ಪುನರಾವರ್ತಿಸಿದರು.
'ಉಭಯ ದೇಶಗಳ ನಾಯಕರೊಂದಿಗೆ ನಾನು ದೂರವಾಣಿ ಮೂಲಕ ಮಾತನಾಡಿದ್ದೆ. ಪ್ರಧಾನಿ ಮೋದಿ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಸಣ್ಣ ಪ್ರಮಾಣದ ವ್ಯಾಪಾರದ ಮೂಲಕ ಪಾಕಿಸ್ತಾನದ ಬಗ್ಗೆಯೂ ತಿಳಿದುಕೊಂಡೆ. ಯುದ್ಧದಲ್ಲಿ ಅನೇಕ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಆಗ ಕರೆ ಮಾಡಿ ಸಂಘರ್ಷವನ್ನು ಇತ್ಯರ್ಥಗೊಳಿಸದಿದ್ದರೆ ವ್ಯಾಪಾರ ಮಾಡುವುದಿಲ್ಲ ಎಂದು ಎಚ್ಚರಿಸಿದ್ದೆ' ಎಂದು ಹೇಳಿದ್ದಾರೆ.
'ಭಾರತ ಹಾಗೂ ಪಾಕಿಸ್ತಾನ ಎರಡು ಶಕ್ತಿಶಾಲಿ ಪರಮಾಣು ರಾಷ್ಟ್ರಗಳಾಗಿದ್ದವು. ಏನೂ ಬೇಕಾದ್ರೂ ಸಂಭವಿಸಬಹುದಿತ್ತು. ಹಾಗಾಗಿ ಪ್ರಧಾನಿಗೆ ನಾನು ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಇದೊಂದು ಮಹತ್ತರ ವಿಷಯ. 11 ಯುದ್ಧ ವಿಮಾನಗಳು ಪತನಗೊಂಡವು. ತುಂಬಾ ದುಬಾರಿ ಜೆಟ್‌ಗಳು' ಎಂದು ಹೇಳಿದ್ದಾರೆ.
ಈಗ ಅನೇಕ ವಿಷಯಗಳಲ್ಲಿ ಸುಧಾರಣೆ ಕಂಡುಬಂದಿದೆ. ಪ್ರಧಾನಿ ಮೋದಿ ಅವರನ್ನು 'ಮಹಾನ್' ವ್ಯಕ್ತಿ ಎಂದೂ ಟ್ರಂಪ್ ಸಂಬೋಧಿಸಿದ್ದಾರೆ.
ಆದರೆ ಈ ಯುದ್ಧ ವಿಮಾನಗಳು ಯಾವ ದೇಶಕ್ಕೆ ಸೇರಿದ್ದು ಎಂಬುದರ ಕುರಿತು ಟ್ರಂಪ್ ಮಾಹಿತಿ ನೀಡಿಲ್ಲ. ಮತ್ತೊಂದೆಡೆ ಪಾಕಿಸ್ತಾನ ನಡುವಣ ಬಿಕ್ಕಟ್ಟಿನಲ್ಲಿ ಯಾವುದೇ ಮೂರನೇ ದೇಶದ ಮಧ್ಯ ಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.