ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕೃಪೆ: ಪಿಟಿಐ
ವಾಷಿಂಗ್ಟನ್: ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷವೂ ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನೆಲ್ಲ ಮಾಡಿದ್ದು ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈವರೆಗೆ ಏಳು ಸಮರಗಳನ್ನು ಕೊನೆಗೊಳಿಸಿದ್ದಾಗಿ ಹೇಳಿಕೊಳ್ಳುತ್ತಿದ್ದ ಟ್ರಂಪ್, ಇಸ್ರೇಲ್–ಗಾಜಾ ಸಂಘರ್ಷ ಕೊನೆಗೊಳ್ಳುತ್ತಿದ್ದಂತೆ ಸಂಖ್ಯೆಯನ್ನು ಎಂಟಕ್ಕೆ ಏರಿಸಿಕೊಂಡಿದ್ದಾರೆ.
ಇಸ್ರೇಲ್‌ಗೆ ತೆರಳುವ ಮುನ್ನ 'ಏರ್ ಫೋರ್ಸ್ ಒನ್' ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷವನ್ನೂ ಕೊನೆಗೊಳಿಸುವ ಯೋಜನೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
ಇಸ್ರೇಲ್–ಗಾಜಾ ಸಂಘರ್ಷ ಅಂತ್ಯದ ಕುರಿತು, 'ಇದು ನಾನು ಅಂತ್ಯಗೊಳಿಸಿದ ಎಂಟನೇ ಯುದ್ಧವಾಗಿದೆ. ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿರುವ ಸುದ್ದಿ ಕೇಳಿದ್ದೇನೆ. ನಾನು ಹಿಂತಿರುಗುವವರೆಗೆ ಕಾಯಬೇಕು ಎಂದಿದ್ದೇನೆ. ಮತ್ತೊಂದು ಯುದ್ಧ ಕೊನೆಗೊಳಿಸುತ್ತಿದ್ದೇನೆ. ಏಕೆಂದರೆ, ನಾನು ಸಮರ ಅಂತ್ಯಗೊಳಿಸುವ ನಿಪುಣ. ಶಾಂತಿ ಸ್ಥಾಪಿಸುವ ಸಮರ್ಥ' ಎಂದು ತಮ್ಮನ್ನು ತಾವು ಹೊಗಳಿಕೊಂಡಿದ್ದಾರೆ.
'ನಾವು ಲಕ್ಷಾಂತರ ಜೀವಗಳನ್ನು ಕಾಪಾಡಿದ್ದೇವೆ. ಭಾರತ, ಪಾಕಿಸ್ತಾನದ ಬಗ್ಗೆ ಯೋಚಿಸಿ. ವರ್ಷಗಳಿಂದ ನಡೆಯುತ್ತಿರುವ ಯುದ್ಧಗಳ ಬಗ್ಗೆ ಚಿಂತಿಸಿ. ನಮ್ಮಲ್ಲಿ 31 ವರ್ಷ, 32 ವರ್ಷ, 37 ವರ್ಷಗಳಿಂದ ನಡೆಯುತ್ತಿರುವ ಸಂಘರ್ಷಗಳಿವೆ. ಪ್ರತಿ ರಾಷ್ಟ್ರದಲ್ಲಿ ಲಕ್ಷಾಂತರ ಜನರು ಹತ್ಯೆಯಾಗಿದ್ದಾರೆ' ಎಂದಿರುವ ಅವರು, ಹೆಚ್ಚಿನ ಯುದ್ಧಗಳನ್ನು ಕೇವಲ ಒಂದು ದಿನದೊಳಗೆ ಕೊನೆಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಟ್ರಂಪ್ ಅವರು ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರದ ನಿರೀಕ್ಷೆಯಲ್ಲಿದ್ದರು. ಆದರೆ, ವೆನೆಜುವೆಲಾದ ವಿರೋಧಪಕ್ಷದ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.