ADVERTISEMENT

ಇರಾನ್‌ ಒಳಗೆ ಅಮೆರಿಕದ ಸೇನೆ ನುಗ್ಗಿಸಲು ಹಿಂಜರಿಯಲ್ಲ: ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 2 ಮಾರ್ಚ್ 2026, 23:04 IST
Last Updated 2 ಮಾರ್ಚ್ 2026, 23:04 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಇರಾನ್‌ ಒಳಗೆ ಅಮೆರಿಕದ ಸೇನಾಪಡೆ ಕಳುಹಿಸುವುದನ್ನು ತಳ್ಳಿಹಾಕಲು ಆಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿದ್ದಾರೆ. ಈ ಮೂಲಕ ಅವರು ದೊಡ್ಡ ಪ್ರಮಾಣದ ದಾಳಿಯ ಬೆದರಿಕೆ ಹಾಕಿದ್ದಾರೆ.

ಇಲ್ಲಿಯವರೆಗೆ ದಾಳಿಯು ಕ್ಷಿಪಣಿ ಮತ್ತು ವೈಮಾನಿಕ ದಾಳಿಯನ್ನು ಕೇಂದ್ರೀಕರಿಸಿತ್ತು. ಇದೀಗ ಟ್ರಂಪ್‌ ಅವರು ಸೇನಾ ಪಡೆ ನುಗ್ಗಿಸುವುದನ್ನು ತಳ್ಳಿಹಾಕಲಾಗದು ಎಂದಿರುವುದು, ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆಯಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  

‘ಭೂಸೇನೆ ನಿಯೋಜಿಸುವ ಅಗತ್ಯ ಬರುವುದಿಲ್ಲ ಎಂದುಕೊಂಡಿದ್ದೇನೆ. ಆದರೆ ಅಗತ್ಯವಿದ್ದರೆ  ಭೂಸೇನೆ ನಿಯೋಜಿಸಲು ನಾನು ಭಯಪಡವುದಿಲ್ಲ ಮತ್ತು ಹಿಂಜರಿಯುವುದೂ ಇಲ್ಲ’ ಎಂದು ಅವರು ‘ನ್ಯೂಯಾರ್ಕ್‌ ಪೋಸ್ಟ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ADVERTISEMENT

ಇನ್ನೊಂದೆಡೆ, ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌, ‘ಇರಾನ್‌ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದು ಹೇಳಿದ್ದಾರೆ. ‘ಇಲ್ಲಿಯವರೆಗೂ ನಾವಿನ್ನೂ ದೊಡ್ಡ ಪ್ರಮಾಣದ ದಾಳಿಯನ್ನು ನಡೆಸಿಯೇ ಇಲ್ಲ. ಆದರೆ ಅದು ಶೀಘ್ರದಲ್ಲಿಯೇ ಸಂಭವಿಸಲಿದೆ’ ಎಂದೂ ವಿವರಿಸಿದ್ದಾರೆ.

ಶ್ವೇತಭವನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ, ‘ನಾವು ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸುವ ಮತ್ತು ನೌಕಾಪಡೆಯನ್ನು ನಿರ್ನಾಮ ಮಾಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ನೌಕಾ ಹಡಗುಗಳನ್ನು ಹೊಡೆದುರುಳಿಸಿದ್ದೇವೆ’ ಎಂದಿದ್ದಾರೆ.

‘ಅಲ್ಲದೆ, ಇರಾನ್‌ ಅಣ್ವಸ್ತ್ರ ಹೊಂದುವುದನ್ನು ತಡೆಯುವ ಮತ್ತು ಇರಾನ್‌ ಆಡಳಿತವು ಗಡಿಯಾಚೆಗಿನ ಭಯೋತ್ಪಾದಕತೆಗೆ ಬೆಂಬಲ ನೀಡುವುದನ್ನು ತಡೆಯುವ ಗುರಿಗಳನ್ನೂ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ರಕ್ತಪಾತ ನಿಲ್ಲಿಸಿ: ಟರ್ಕಿ

ಇಸ್ತಾಂಬುಲ್‌: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕೊನೆಗೊಳಿಸಲು ಕರೆ ನೀಡಿರುವ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ನಡುವೆ ಕದನ ವಿರಾಮಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.