ಡೊನಾಲ್ಡ್ ಟ್ರಂಪ್, ಉರ್ಸುಲಾ ವಾನ್ ಡೆರ್ ಲೇಯೆನ್
(ರಾಯಿಟರ್ಸ್ ಚಿತ್ರ)
ಬ್ರುಸೆಲ್ಸ್ (ಬೆಲ್ಜಿಯಂ):ಮದ್ಯ, ಗೋಮಾಂಸ ಸೇರಿದಂತೆ ಅಮೆರಿಕದಿಂದ ಆಮದಾಗುವ ಎಲ್ಲ ಉತ್ಪನ್ನಗಳ ಮೇಲೆ ಕಠಿಣವಾದ ಹೊಸ ಸುಂಕಗಳನ್ನು ವಿಧಿಸಿ ಕೆನಡಾ ಸೇರಿದಂತೆ ಐರೋಪ್ಯ ಒಕ್ಕೂಟದ (ಇಯು) ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳು ಅಮೆರಿಕಕ್ಕೆ ತಿರುಗೇಟು ನೀಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲ್ಯೂಮಿನಿಯಂ ಮತ್ತು ಉಕ್ಕಿನ ಆಮದುಗಳ ಮೇಲೆ ಸುಂಕ ಹೆಚ್ಚಿಸಿರುವುದಕ್ಕೆ ಪ್ರತೀಕಾರವಾಗಿ ಈ ಕ್ರಮಕೈಗೊಳ್ಳಲಾಗಿದೆ.
ಅಮೆರಿಕಕ್ಕೆ ಉಕ್ಕು ಮತ್ತು ಅಲ್ಯೂಮಿನಿಯಂ ಅನ್ನು ಅತೀ ಹೆಚ್ಚು ರಫ್ತು ಮಾಡುವ ರಾಷ್ಟ್ರವಾಗಿ ಕೆನಡಾ ಗುರುತಿಸಿಕೊಂಡಿದೆ. ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಅಮೆರಿಕ ಶೇ 25 ಸುಂಕ ವಿಧಿಸಿರುವುದಕ್ಕೆ, ಕೆನಡಾ ಕೂಡ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳು ಹಾಗೂ ಉಪಕರಣಗಳು, ಕ್ರೀಡಾ ಸಾಮಗ್ರಿಗಳು, ಎರಕ ಹೊಯ್ದ ಕಬ್ಬಿಣದ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚು ಸುಂಕವನ್ನು ವಿಧಿಸಿರುವುದಾಗಿ ಹೇಳಿದೆ.
ಅಮೆರಿಕದಿಂದ ಆಮದು ಮಾಡಿಕೊಳ್ಳುವ ಗೋಮಾಂಸ, ಕೋಳಿ, ಮದ್ಯ (ಬರ್ಬನ್) ಮೋಟರ್ ಸೈಕಲ್‌ಗಳು, ಪೀನಟ್ ಬಟರ್ ಹಾಗೂ ಜೀನ್ಸ್ ಬಟ್ಟೆಗಳಿಗೆ ಇಯು ರಾಷ್ಟ್ರಗಳು ಸುಂಕವನ್ನು ಹೆಚ್ಚಿಸಿವೆ.
‘ಇದರಿಂದ ಯುರೋಪ್ ಮತ್ತು ಅಮೆರಿಕದಲ್ಲಿ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ. ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ’ ಎಂದು ಯುರೋಪಿಯನ್ ಕಮಿಷನ್ ವಾನ್ ಡೆರ್ ಲೆಯೆನ್ ಹೇಳಿದ್ದಾರೆ.
‘ಸುಂಕ ಹೆಚ್ಚಳದ ಕ್ರಮಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತವೆ. ಸುಂಕಗಳು ತೆರಿಗೆಗಳಾಗಿದ್ದು, ಇವು ವ್ಯಾಪಾರ–ವ್ಯವಹಾರಕ್ಕೆ ಕೆಡುಕು ಮಾಡಲಿವೆ. ಇವುಗಳಿಂದ ಗ್ರಾಹಕರಿಗೂ ಇನ್ನೂ ಹೆಚ್ಚಿನ ತೊಂದರೆಯಾಗಲಿದೆ. ಸುಂಕದ ಏರಿಕೆ ವಿಚಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಮಾತುಕತೆಗಳಿಗೆ ಯಾವಾಗಲೂ ಮುಕ್ತವಾಗಿರುತ್ತೇವೆ’ ಎಂದು ಲೆಯೆನ್ ಹೇಳಿದ್ದಾರೆ.
ಐರೋಪ್ಯ ಒಕ್ಕೂಟದ ಸುಂಕ ಏರಿಕೆಗಳು, ಅಮೆರಿಕದ ಸುಂಕ ಹೆಚ್ಚಳದಿಂದ ಆಗುವ ಹೆಚ್ಚುವರಿ ಹಾನಿಯನ್ನು ತಗ್ಗಿಸುವ ಜತೆಗೆ ಅಮೆರಿಕದ ಮೇಲೆ ಒತ್ತಡ ತೀವ್ರಗೊಳಿಸುವ ಗುರಿ ಹೊಂದಿವೆ ಎಂದು ಇಯು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಕೆನಡಾದ ಸಾರ್ವಭೌಮತ್ವ ಗೌರವಿಸಿದರೆ ಮತ್ತು ವ್ಯಾಪಾರಕ್ಕೆ ಹೆಚ್ಚು ಸಮಗ್ರವಾದ ವಿಧಾನವನ್ನು ಅನುಸರಿಸಲು ಸಿದ್ಧವಿದ್ದರೆ ಟ್ರಂಪ್ ಅವರನ್ನು ಭೇಟಿ ಮಾಡಲು ಸಿದ್ಧ’ ಎಂದು ಶುಕ್ರವಾರ ಕೆನಡಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಮಾರ್ಕ್ ಕಾರ್ನೆ ಬುಧವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.