ಸ್ಪೈಡರ್‌ಮ್ಯಾನ್ ವೇಷ ಧರಿಸಿದ್ದ ವ್ಯಕ್ತಿಯೊಂದಿಗೆ ಪೋಪ್ ಫ್ರಾನ್ಸಿಸ್ (2021ರ ಚಿತ್ರ)
–ರಾಯಿಟರ್ಸ್ ಚಿತ್ರ
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ಒಬ್ಬ ‘ಸುಧಾರಣಾವಾದಿ ಧರ್ಮಗುರು’ ಆಗಿ ಇತಿಹಾಸದ ಪುಟಗಳಲ್ಲಿ ಉಳಿಯಲಿದ್ದಾರೆ. ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಕೆಲವು ಸಂಪ್ರದಾಯಗಳನ್ನು ಮುರಿದು ಕ್ಯಾಥೊಲಿಕ್ ಚರ್ಚ್ ಅನ್ನು ‘ಸಹಾನುಭೂತಿಯ’ ಕೇಂದ್ರವನ್ನಾಗಿಸಲು ಅವರು ಶ್ರಮಪಟ್ಟರು.
‘ಜನರ ಪೋಪ್’ ಎಂದೇ ಕರೆಯಲ್ಪಡುವ ಅರ್ಜೆಂಟೀನಾದ ಧರ್ಮಗುರು, ತುಳಿತಕ್ಕೊಳಗಾದ ಜನರ ಪರವಾಗಿದ್ದರು. ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದ ಸಂದರ್ಭದಲ್ಲೇ, ಚರ್ಚ್‌ನೊಳಗಿನ ಸಂಪ್ರದಾಯವಾದಿಗಳಿಂದ ವಿರೋಧವನ್ನೂ ಎದುರಿಸಿದ್ದಾರೆ.
ವಲಸಿಗರಿಂದ ಹಿಡಿದು ಹವಾಮಾನ ಬದಲಾವಣೆಯಿಂದ ಸಂಕಷ್ಟ ಎದುರಿಸಿದ ಸಮುದಾಯಗಳವರೆಗೆ ಅತ್ಯಂತ ಯಾತನಾಮಯ ಬದುಕು ಸಾಗಿಸುವವರ ಜತೆ ದೃಢವಾಗಿ ನಿಂತಿದ್ದರು. ಜಾಗತಿಕ ಹವಾಮಾನ ಬದಲಾವಣೆಯು ‘ಮನುಕುಲದಿಂದ ಉಂಟಾದ ಬಿಕ್ಕಟ್ಟು’ ಎಂದು ಅವರು ಎಚ್ಚರಿಸಿದ್ದರು.
2013ರ ಮಾರ್ಚ್‌ನಲ್ಲಿ ಪೋಪ್ ಆಗಿ ಆಯ್ಕೆಯಾದ ದಿನದಿಂದಲೂ ಕ್ಯಾಥೊಲಿಕ್ ಚರ್ಚ್‌ನ ನಾಯಕರಾಗಿ ತಮ್ಮ ಛಾಪು ಮೂಡಿಸಲು ಅವರು ಉತ್ಸುಕರಾಗಿದ್ದರು.
13ನೇ ಶತಮಾನದಲ್ಲಿ ಪೋಪ್ ಆಗಿದ್ದ, ತನ್ನೆಲ್ಲಾ ಸಂಪತ್ತನ್ನು ತ್ಯಜಿಸಿ ಬಡವರಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸೇಂಟ್ ಫ್ರಾನ್ಸಿಸ್ ಬಳಿಕ ಫ್ರಾನ್ಸಿಸ್ ಎಂಬ ಹೆಸರನ್ನು ಪಡೆದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
‘ಚರ್ಚ್‌ಗಳು ಬಡವರ ಪರವಾಗಿ ಇರಬೇಕೆಂದು ಬಯಸುತ್ತಿದ್ದೇನೆ’ ಎಂದು 266ನೇ ಪೋಪ್ ಆಗಿ ಆಯ್ಕೆಯಾದ ಮೂರು ದಿನಗಳ ಬಳಿಕ ಅವರು ಹೇಳಿದ್ದರು. ಐಷಾರಾಮಿ ಜೀವನ ಸಾಗಿಸುವ ಅವಕಾಶವಿದ್ದರೂ ಅದನ್ನೆಲ್ಲ ತ್ಯಜಿಸಿ ಸರಳ ಬದುಕಿನ ಮಾರ್ಗ ಹಿಡಿದರು. ವಿಧವೆಯರು, ಅತ್ಯಾಚಾರ ಸಂತ್ರಸ್ತರು ಮತ್ತು ಕೈದಿಗಳ ಜತೆ ದೂರವಾಣಿ ಕರೆಮಾಡಿ ಮಾತನಾಡುತ್ತಿದ್ದರು.
ಪೋಪ್ ಆಗಿ ಆಯ್ಕೆಯಾಗಿ ವ್ಯಾಟಿಕನ್‌ನಲ್ಲಿ ತಮ್ಮ ಮೊದಲ ಈಸ್ಟರ್ ಆಚರಿಸುವ ಮುನ್ನ ಅವರು ರೋಮ್‌ನ ಜೈಲಿನಲ್ಲಿ ಕೈದಿಗಳ ಪಾದಗಳನ್ನು ತೊಳೆದು ಚುಂಬಿಸಿದ್ದರು. ಈ ಹಿಂದಿನ ಪೋಪ್‌ಗಳಿಗಿಂತ ತಾನು ಭಿನ್ನ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂಬುದನ್ನು ಆರಂಭದಲ್ಲೇ ತೋರಿಸಿ, ಜಾಗತಿಕ ಮೆಚ್ಚುಗೆಯನ್ನು ಗಳಿಸಿದ್ದರು.
ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಫ್ರಾನ್ಸಿಸ್ ಅವರು ಇಟಲಿಯ ದ್ವೀಪ ಲಾಂಪೆಡೂಸಾವನ್ನು ಆಯ್ಕೆಮಾಡಿಕೊಂಡರು. ಏಕೆಂದರೆ, ವಲಸಿಗರು ಇದೇ ದ್ವೀಪದ ಮೂಲಕ ಯುರೋಪ್ ಪ್ರವೇಶಿಸುತ್ತಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ಮೆಕ್ಸಿಕೊ ಗಡಿಯಲ್ಲಿ ಗೋಡೆಯನ್ನು ನಿರ್ಮಿಸುವ ಯೋಜನೆಯನ್ನು ‘ಕ್ರೈಸ್ತ ವಿರೋಧಿ ನಡೆ’ ಎಂದು ಖಂಡಿಸಿದ್ದರು.
2016ರಲ್ಲಿ ಯುರೋಪ್‌ನಲ್ಲಿ ವಲಸೆ ಬಿಕ್ಕಟ್ಟು ತಲೆದೋರಿದ್ದಾಗ ಗ್ರೀಕ್ ದ್ವೀಪವಾದ ಲೆಸ್ಬೋಸ್‌ಗೆ ಭೇಟಿ ನೀಡಿದ್ದ ಅವರು ಆಶ್ರಯ ಕೋರಿ ಅಲ್ಲಿಗೆ ಬಂದಿದ್ದ ಸಿರಿಯಾದ ಮೂರು ಮುಸ್ಲಿಂ ಕುಟುಂಬಗಳೊಂದಿಗೆ ರೋಮ್‌ಗೆ ವಾಪಸಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.