ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗ
–ಪಿಟಿಐ ಚಿತ್ರ
ಪ್ಯಾರಿಸ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳು ಒಟ್ಟಾಗಿ ಹೋರಾಟ ನಡೆಸಲಿವೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗವು, ಪಹಲ್ಗಾಮ್‌ನಲ್ಲಿನ ಉಗ್ರರ ದಾಳಿ ನಂತರ ಭಾರತ ಕೈಗೊಂಡ ‘ಆಪರೇಷನ್ ಸಿಂಧೂರ’ ಹಾಗೂ ಉಗ್ರವಾದದ ವಿರುದ್ಧ ಭಾರತ ಕೈಗೊಂಡಿರುವ ಹೋರಾಟ ಕುರಿತು ವಿವರಿಸಿದೆ.
‘ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಧ್ವನಿ ಎತ್ತುವ ಅಗತ್ಯವಿದೆ. ಅದರಂತೆ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಫ್ರಾನ್ಸ್ ಸಂಪೂರ್ಣ ಬೆಂಬಲ ನೀಡುತ್ತದೆ’ ಎಂದು ಫ್ರಾನ್ಸ್‌ನ ಸೆನೆಟರ್‌ಗಳು ಭರವಸೆ ನೀಡಿರುವುದಾಗಿ ಪ್ರಸಾದ್ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಭಯೋತ್ಪಾದನೆಯ ನಡುವಿನ ವ್ಯತ್ಯಾಸ ಈಗ ಮಾಯವಾಗಿದೆ. ಪಾಕ್ ಸೇನೆ ಭಯೋತ್ಪಾದನೆಯನ್ನು ಸಾಧನವಾಗಿ ಬಳಸುತ್ತಿದೆ ಎಂದು ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
‘ಭಾರತೀಯರಂತೆ ನಾವೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ಭಯೋತ್ಪಾದನೆ ಎಂಬುದು ‘ಕ್ಯಾನ್ಸರ್’ ಇದ್ದಂತೆ. ಇದರ ವಿರುದ್ಧ ನಾವು ಒಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಬಲಶಾಲಿಯಾಗುತ್ತೇವೆ’ ಎಂದು ಫ್ರಾನ್ಸ್‌ನ ಸೆನೆಟರ್‌ರೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ವ್ಯಕ್ತಪಡಿಸಲು ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗವು ಇಟಲಿಯಲ್ಲಿ ಸಂವಾದ ಮತ್ತು ಸಭೆಗಳನ್ನು ನಡೆಸಲು ನಿರ್ಧರಿಸಿದೆ. ಬಳಿಕ ಡೆನ್ಮಾರ್ಕ್, ಬ್ರಿಟನ್, ಬೆಲ್ಜಿಯಂ ಮತ್ತು ಜರ್ಮನಿಗೆ ಭೇಟಿ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.