ADVERTISEMENT

ಹಸೀನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಇಂಟರ್‌ಪೋಲ್‌ಗೆ ಮನವಿ

ಪಿಟಿಐ
Published 20 ಏಪ್ರಿಲ್ 2025, 11:13 IST
Last Updated 20 ಏಪ್ರಿಲ್ 2025, 11:13 IST
ಶೇಖ್‌ ಹಸೀನಾ–ಪಿಟಿಐ ಚಿತ್ರ
ಶೇಖ್‌ ಹಸೀನಾ–ಪಿಟಿಐ ಚಿತ್ರ   

ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 12 ಜನರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಬಾಂಗ್ಲಾದೇಶ ಪೊಲೀಸರ ರಾಷ್ಟ್ರೀಯ ಕೇಂದ್ರೀಯ ಬ್ಯೂರೋ (ಎನ್‌ಸಿಬಿ) ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನ್ಯಾಯಾಲಯಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಅಥವಾ ತನಿಖಾ ಸಂಸ್ಥೆಗಳಿಂದ ಮೇಲ್ಮನವಿ ಬಂದಾಗ ಎನ್‌ಸಿಬಿ ಇಂಟರ್​​ಪೋಲ್‌ಗೆ ಈ ರೀತಿ ಮನವಿ ಮಾಡುತ್ತದೆ ಎಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಮಾಧ್ಯಮ) ಇನಾಮುಲ್ ಹಕ್ ಸಾಗೋರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ 'ದಿ ಡೈಲಿ ಸ್ಟಾರ್' ವರದಿ ಮಾಡಿದೆ.

ವಿವಾದಾತ್ಮಕ ಮೀಸಲಾತಿ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾದ ನಂತರ ಹಸೀನಾ ಅವರು 2024ರ ಆಗಸ್ಟ್‌ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಭಾರತಕ್ಕೆ ಪಲಾಯನ ಮಾಡಿದ್ದರು.

ADVERTISEMENT

ಆಗಸ್ಟ್ 8ರಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮ್ಮದ್ ಯೂನಸ್ ಅಧಿಕಾರ ವಹಿಸಿಕೊಂಡಿದ್ದರು. ಹಸೀನಾ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದ ವೇಳೆ ಸುಮಾರು 753 ಜನ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಕ್ರಮವನ್ನು ದೇಶದ ಜನರ ಮೇಲೆ ನಡೆಸಿದ ನರಮೇಧ ಎಂದು ಮಧ್ಯಂತರ ಸರ್ಕಾರ ಹೇಳಿತ್ತು.

ನರಮೇಧ ಆರೋಪದ ಮೇಲೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಹಸೀನಾ ಹಾಗೂ ಮಾಜಿ ಸಚಿವರು, ಸಲಹೆಗಾರರ ವಿರುದ್ದ ಬಂಧನ ವಾರಂಟ್‌ ಹೊರಡಿಸಿತ್ತು.

ಇಂಟರ್‌ಪೋಲ್‌ ನೋಟಿಸ್‌:

ಇಂಟರ್‌‍ಪೋಲ್‌ ಎಂಬುದು ‘ಇಂಟರ್‌ನ್ಯಾಷನಲ್‌ ಪೊಲೀಸ್ ಆರ್ಗನೈಸೇಷನ್‌’ ಎಂಬುದರ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆ. ವಿಶ್ವದ 196 ದೇಶಗಳ ಸದಸ್ಯತ್ವ ಹೊಂದಿರುವ ಈ ಸಂಘಟನೆಯು ಅಪರಾಧಿಗಳ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ದೇಶ–ದೇಶಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಒಂದು ಸಂಸ್ಥೆಯಾಗಿದೆ.

ರೆಡ್ ಕಾರ್ನರ್ ನೋಟಿಸ್:

ಅಪರಾಧ ಕೃತ್ಯಗಳಲ್ಲಿ ಬೇಕಾಗಿರುವ ಮತ್ತು ಗಡೀಪಾರಿನ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪತ್ತೆ ಮತ್ತು ಬಂಧನಕ್ಕೆ ಸಹಕಾರ ಕೋರಿ ಹೊರಡಿಸಲಾಗುವ ನೋಟಿಸ್‌. ಇಂಟರ್‌ಪೋಲ್‌ನ ಸದಸ್ಯ ರಾಷ್ಟ್ರವು ಇಂತಹ ನೋಟಿಸ್‌ ಹೊರಡಿಸಲು ಮನವಿ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.