ADVERTISEMENT

ಇರಾನ್ ಮೇಲೆ ಅಮೆರಿಕ ದಾಳಿ | ಹೊಸ ಯುದ್ಧ ಆರಂಭಿಸಿದ ಟ್ರಂಪ್: ರಷ್ಯಾ ಕಿಡಿ

ರಾಯಿಟರ್ಸ್
Published 22 ಜೂನ್ 2025, 11:13 IST
Last Updated 22 ಜೂನ್ 2025, 11:13 IST
<div class="paragraphs"><p>ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್ ಚಿತ್ರ

ಮಾಸ್ಕೊ: ಇರಾನ್‌ ಮೇಲೆ ದಾಳಿ ನಡೆಸುವುದರೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊಸ ಯುದ್ಧ ಆರಂಭಿಸಿದ್ದಾರೆ ಎಂದು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಹೇಳಿದ್ದಾರೆ.

ADVERTISEMENT

ಅಮೆರಿಕ ಸೇನಾ ಪಡೆಗಳು ಇರಾನ್‌ನ ಮೂರು ಪ್ರಮುಖ ಪರಮಾಣು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿವೆ. ಈ ಬಗ್ಗೆ ಇಂದು (ಭಾನುವಾರ, ಜೂನ್‌ 22) ಮಾಹಿತಿ ನೀಡಿರುವ ಡೊನಾಲ್ಡ್‌ ಟ್ರಂಪ್‌, ಶಾಂತಿ ಮಾತುಕತೆಗೆ ಒಪ್ಪದಿದ್ದರೆ ಇನ್ನಷ್ಟು ವಿಧ್ವಂಸಕ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'ಟೆಲಿಗ್ರಾಮ್‌'ನಲ್ಲಿ ಪ್ರತಿಕ್ರಿಯಿಸಿರುವ ಮೆಡ್ವೆಡೆವ್‌, 'ಶಾಂತಿಪ್ರಿಯ ಅಧ್ಯಕ್ಷ ಎಂದು ಹೇಳಿಕೊಳ್ಳುವ ಟ್ರಂಪ್‌, ಅಮೆರಿಕದ ಪರವಾಗಿ ಹೊಸ ಸಮರ ಆರಂಭಿಸಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ ಮೇಲಿನ ದಾಳಿ ಬಳಿಕ ಟ್ರಂಪ್‌ ಅವರು, 'ಫೋರ್ಡೊ, ನತಾಂಜ್‌ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ. ಇಂತಹ ಕಾರ್ಯಾಚರಣೆ ನಡೆಸಲು ಜಗತ್ತಿನ ಬೇರಾವ ದೇಶದ ಸೈನ್ಯಕ್ಕೂ ಸಾಧ್ಯವಿಲ್ಲ' ಎಂದು ಹೇಳಿಕೊಂಡಿದ್ದರು.

ಇದನ್ನು ಉಲ್ಲೇಖಿಸಿರುವ ರಷ್ಯಾ ನಾಯಕ, 'ಇಂತಹ ಯಶಸ್ಸುಗಳ ಮೂಲಕ ನೊಬೆಲ್‌ ಪುರಸ್ಕಾರ ಗಿಟ್ಟಿಸಲು ಟ್ರಂಪ್‌ಗೆ ಸಾಧ್ಯವಾಗದು' ಎಂದು ಕುಟುಕಿದ್ದಾರೆ.

ರಷ್ಯಾದ ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿ (ಎಲ್‌ಡಿಪಿಆರ್‌) ನಾಯಕ ಲಿಯೋನಿಡ್‌ ಸ್ಲುಟ್‌ಸ್ಕಿ, 'ಇರಾನ್ ಮೇಲೆ ದಾಳಿ ಮಾಡುವಂತಹ ಯಾವುದೇ ಮಿಲಿಟರಿ ಕಾರಣಗಳು ಅಮೆರಿಕದ ಬಳಿ ಇರಲಿಲ್ಲ. ಇದನ್ನು (ದಾಳಿಯನ್ನು) ಅಂತರರಾಷ್ಟ್ರೀಯ ಕಾನೂನಿನ ಅಡಿ ಸಮರ್ಥಿಸಿಕೊಳ್ಳಲು ಆಗುವುದಿಲ್ಲ' ಎಂದು ಕಟುವಾಗಿ ಹೇಳಿದ್ದಾರೆ.

'ಉಲ್ಬಣಿಸುತ್ತಿರುವ ಸಂಘರ್ಷದ ಪರಿಣಾಮಗಳು ಪ್ರಾದೇಶಿಕ ಗಡಿ ದಾಟುವ ಆತಂಕವಿದೆ. ಟೆಹರಾನ್‌ನ ಪ್ರತಿದಾಳಿಯನ್ನು ಅಮೆರಿಕ ಎದುರಿಸಲಿದೆ. ಇವೆಲ್ಲವೂ ಮೂರನೇ ಮಹಾಯುದ್ಧದ ಸಂಭಾವ್ಯತೆಯನ್ನು ಹೆಚ್ಚಿಸುತ್ತಿವೆ' ಎಂದು ಸ್ಲುಟ್‌ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.