ADVERTISEMENT

UAE ಮೇಲೂ ಇರಾನ್‌ ಕ್ಷಿಪಣಿ ದಾಳಿ: ನಾಗರಿಕರ ಮೊಬೈಲ್‌ಗಳಿಗೆ ಎಚ್ಚರಿಕೆಯ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 13:07 IST
Last Updated 28 ಫೆಬ್ರುವರಿ 2026, 13:07 IST
<div class="paragraphs"><p>ಅಬುದಾಬಿ ಮೇಲೆ ಇರಾನ್‌ ಕ್ಷಿಪಣಿ ದಾಳಿಯ ದೃಶ್ಯ</p></div>

ಅಬುದಾಬಿ ಮೇಲೆ ಇರಾನ್‌ ಕ್ಷಿಪಣಿ ದಾಳಿಯ ದೃಶ್ಯ

   

ಎಕ್ಸ್ ಚಿತ್ರ

ದುಬೈ: ತನ್ನ ಪ್ರದೇಶವನ್ನು ಗುರಿಯಾಗಿಸಿಕೊಂಡು ಇರಾನ್‌ ಹಾರಿಸಿದ ಕ್ಷಿಪಣಿಗಳನ್ನು ಸಂಯುಕ್ತ ಅರಬ್‌ ಸಂಸ್ಥಾನವು ಯಶಸ್ವಿಯಾಗಿ ತಡೆದಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.

ADVERTISEMENT

ಅಬುದಾಬಿಯ ವಸತಿ ಪ್ರದೇಶದಲ್ಲಿ ಕ್ಷಿಪಣಿಯ ಅವಶೇಷಗಳು ಪತ್ತೆಯಾಗಿವೆ. ದಾಳಿಯಲ್ಲಿ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ ಮತ್ತು ಏಷ್ಯಾ ಖಂಡದ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ತುರ್ತು ತಂಡಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ ಎಂದು ಯುಎಇ ಅಧಿಕಾರಿಗಳು ಖಚಿತಪಡಿಸಿರುವುದಾಗಿ ಅಲ್ಲಿನ ಕಾರ್ಮಿಕ ಇಲಾಖೆ ಫೇಸ್‌ಬುಕ್‌ನಲ್ಲಿ ತಿಳಿಸಿದೆ.

ಇದೊಂದು ಹೇಡಿತನದ ಕೃತ್ಯವಾಗಿದೆ. ನಾಗರಿಕರ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ತನ್ನ ನೆಲದಲ್ಲಿ ವಾಸಿಸುತ್ತಿರುವ ನಾಗರಿಕರ ರಕ್ಷಣೆಯೇ ಪ್ರಥಮ ಆದ್ಯತೆಯಾಗಿದ್ದು, ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದವರಿಗೆ ತಕ್ಕ ಪ್ರತ್ಯುತ್ತರ ನೀಡಲು ಯುಎಇ ಬದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಂದೇಶ

ಈ ನಡುವೆ ಅಲ್ಲಿನ ನಿವಾಸಿಗಳಿಗೆ ದುಬೈ ಕಾಲಮಾನದ ಪ್ರಕಾರ ಮಧ್ಯಾಹ್ನ 2.20ಕ್ಕೆ ಎಚ್ಚರಿಕೆಯ ಸಂದೇಶವನ್ನು ಅಲ್ಲಿನ ದೂರಸಂಪರ್ಕ ಇಲಾಖೆ ರವಾನಿಸಿದೆ. 

ಈ ಕುರಿತು ಪ್ರಜಾವಾಣಿ ಡಿಜಿಟಲ್‌ ತಂಡದೊಂದಿಗೆ ಮಾತನಾಡಿರುವ ದುಬೈನಲ್ಲಿ ನೆಲೆಸಿರುವ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿ ಸ್ಮೃತಿ ಹನುಮಂತರಾಜು, ‘ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಸುರಕ್ಷಿತವಾಗಿದ್ದೇವೆ. ತುರ್ತು ಅಲ್ಲದಿದ್ದರೆ ಅನಗತ್ಯವಾಗಿ ಓಡಾಡಬೇಡಿ ಎಂದು ಸರ್ಕಾರ ಎಚ್ಚರಿಕೆಯ ಸಂದೇಶ ನೀಡಿದೆ. ವಾಯು ಮಾರ್ಗವನ್ನು ಸ್ಥಗಿತಗೊಳಿಸಿರುವುದರಿಂದ ಇಲ್ಲಿಗೆ ಬಂದವರಿಗೆ ತಮ್ಮ ದೇಶಕ್ಕೆ ಮರಳಲು ಸಂಕಷ್ಟ ಎದುರಾಗಿದೆ’ ಎಂದಿದ್ದಾರೆ.

‘ಸೇನಾ ವಾಹನಗಳು ನಿರಂತರ ಗಸ್ತು ತಿರುಗುತ್ತಿವೆ. ಕಂಪನಿಗಳೂ ತಮ್ಮ ನೌಕರರಿಗೆ ಸಂದೇಶ ಕಳುಹಿಸುತ್ತಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ವಿಸ್ತರಿಸುವ ಕುರಿತೂ ತಮ್ಮ ಸಂದೇಶದಲ್ಲಿ ತಿಳಿಸಿವೆ’ ಎಂದು ಮಾಹಿತಿ ನೀಡಿದ್ದಾರೆ.

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಲ್ಲಿ ನೆಲೆಸಿರುವ ನಾಗರಿಕರಿಗೆ ಸಂದೇಶ ಕಳುಹಿಸಿದೆ. ಅನಗತ್ಯ ಓಡಾಟ ತಪ್ಪಿಸುವಂತೆ, ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸುವಂತೆಯೂ ತಿಳಿಸಿದೆ. ರಾಯಭಾರ ಕಚೇರಿಯು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಅಗತ್ಯವಿದ್ದಲ್ಲಿ ತುರ್ತು ಸಂಖ್ಯೆಗೆ ಕರೆ ಮಾಡುವಂತೆಯೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.