
ಇಸ್ರೇಲ್ ನಡೆಸಿದ ವಾಯುದಾಳಿ ಹಾಗೂ ದಾಳಿಯಲ್ಲಿ ಗಾಯಗೊಂಡ ಮಗು
– ರಾಯಿಟರ್ಸ್ ಚಿತ್ರ
ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ): ಗಾಜಾದ ದಕ್ಷಿಣ ಭಾಗದ ರಫಾ ನಗರದಲ್ಲಿರುವ ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಕನಿಷ್ಠ 35 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಕಾರ್ಯಕರ್ತರು ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು. ಹೊತ್ತಿ ಉರಿಯುತ್ತಿರುವ ಅವಶೇಷಗಳ ನಡುವೆ ಹಲವರು ಸಿಲುಕಿಕೊಂಡಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ರಫಾದಲ್ಲಿ ಸೇನೆಯ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್‌ಗೆ ಆದೇಶಿಸಿದ ಎರಡೇ ದಿನದಲ್ಲಿ ಈ ದಾಳಿ ನಡೆದಿದೆ. ಇಸ್ರೇಲ್ ಆಕ್ರಮಣದಿಂದಾಗಿ ಗಾಜಾದ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ರಫಾದಲ್ಲಿ ಆಶ್ರಯ ಪಡೆದಿದ್ದಾರೆ. ಲಕ್ಷಾಂತರ ಮಂದಿ ಇಲ್ಲಿ ಡೇರೆಯಲ್ಲಿ ವಾಸವಿದ್ದಾರೆ. ಸಾವಿರಾರು ಮಂದಿ ಪಲಾಯನ ಮಾಡಿದ್ದಾರೆ.
ವಾಯುದಾಳಿಯಿಂದಾಗಿ ದಟ್ಟ ಹೊಗೆ ಆವರಿಸಿಕೊಂಡಿದ್ದು ವಿಡಿಯೊದಲ್ಲಿ ದಾಖಲಾಗಿದೆ. ದಾಳಿ ನಡೆಸಿದ್ದನ್ನು ಇಸ್ರೇಲ್ ಸೇನೆ ಖಚಿತಪಡಿಸಿದ್ದು. ಹಮಾಸ್ ಬಂಡುಕೋರರ ನೆಲೆಯ ಮೇಲೆ ದಾಳಿ ಮಾಡಲಾಗಿದೆ. ಹಮಾಸ್‌ನ ಇಬ್ಬರು ಹಿರಿಯ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಅಲ್ಲದೇ ನಾಗರಿಕರ ಸಾವಿನ ಬಗ್ಗೆ ತನಿಖೆ ಮಾಡಲಾಗುವುದು ಎಂದು ಹೇಳಿದೆ.
‘ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಜಾರಿಯಲ್ಲಿವೆ. ಸಾವು–ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಪ್ಯಾಲೆಸ್ಟೀನ್‌ನ ರೆಡ್ ಕ್ರೆಸೆಂಟ್ ಸೊಸೈಟಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.