ADVERTISEMENT

ಗಾಜಾ ಆಕ್ರಮಣಕ್ಕೆ ಇಸ್ರೇಲ್‌ ಸೇನೆ ಸನ್ನದ್ಧ! ನಿರ್ಣಾಯಕ ಹಂತಕ್ಕೆ ಯುದ್ಧ

ನಗರದ ಸುತ್ತುವರಿದ ಸೇನೆ * ಟ್ಯಾಂಕರ್‌ಗಳ ನಿಯೋಜನೆ * ಹಮಾಸ್‌ ಅಡಗುತಾಣ ಗುರಿಯಾಗಿಸಿ ದಾಳಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 15:38 IST
Last Updated 6 ನವೆಂಬರ್ 2023, 15:38 IST
ಇಸ್ರೇಲ್‌ನ ವಾಯುದಾಳಿಯಿಂದಾಗಿ ನೆಲಸಮಗೊಂಡಿರುವ ನಿರಾಶ್ರಿತರ ಶಿಬಿರವಾಗಿದ್ದ ಕಟ್ಟಡದ ಅವಶೇಷದ ಬಳಿ ಪ್ಯಾಲೆಸ್ಟೀನ್‌ ನಾಗರಿಕನ ಆಕ್ರಂದನ –ಎಎಫ್‌ಪಿ ಚಿತ್ರ
ಇಸ್ರೇಲ್‌ನ ವಾಯುದಾಳಿಯಿಂದಾಗಿ ನೆಲಸಮಗೊಂಡಿರುವ ನಿರಾಶ್ರಿತರ ಶಿಬಿರವಾಗಿದ್ದ ಕಟ್ಟಡದ ಅವಶೇಷದ ಬಳಿ ಪ್ಯಾಲೆಸ್ಟೀನ್‌ ನಾಗರಿಕನ ಆಕ್ರಂದನ –ಎಎಫ್‌ಪಿ ಚಿತ್ರ   

ದೇರ್ ಅಲ್-ಬಾಲಾಹ್, ಗಾಜಾ ಪಟ್ಟಿ: ಇಸ್ರೇಲ್‌ನ ಪಡೆಗಳು ಗಾಜಾ ನಗರವನ್ನು ಸುತ್ತುವರಿದಿದ್ದು, ಹಮಾಸ್‌ ನಿಯಂತ್ರಣದಲ್ಲಿರುವ ಪ್ರಾಂತ್ಯದ ದೂರಸಂಪರ್ಕ ಬಹುತೇಕ ಕಡಿತಗೊಂಡಿದೆ.

ಮಂಗಳವಾರ ಈ ಪಡೆಗಳು ಗಾಜಾ ನಗರ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಮಾಸ್‌ ಪ್ರತ್ಯೇಕತಾವಾದಿಗಳು ಗಾಜಾಪಟ್ಟಿಯಲ್ಲಿ ಅಡಗುತಾಣವಾಗಿ ಸುರಂಗಜಾಲ ನಿರ್ಮಿಸಿಕೊಂಡಿದ್ದು, ಹೋರಾಟ ಮಾಡಲು ವರ್ಷಗಳಿಂದ ಸನ್ನದ್ಧರಾಗಿದ್ದಾರೆ. ಹೀಗಾಗಿ, ಬರುವ ದಿನಗಳಲ್ಲಿ ಉಭಯ ಕಡೆಗಳಲ್ಲಿ ಸಾವು–ನೋವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ ವರದಿಗಳು ತಿಳಿಸಿವೆ. 

ADVERTISEMENT

ಯುದ್ಧ ಆರಂಭವಾದ ಬಳಿಕ ಈವರೆಗೆ 10 ಸಾವಿರ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಸೇನೆ ಸುತ್ತುವರಿದಂತೆ ಗಾಜಾಗೆ ಭಾನುವಾರ ದೂರಸಂಪರ್ಕ ವ್ಯವಸ್ಥೆಗಳು ಸ್ಥಗಿತವಾಗಿದ್ದವು. ಸೋಮವಾರ ಬೆಳಿಗ್ಗೆ ಮತ್ತೆ ಮರುಸ್ಥಾಪಿಸಲಾಯಿತು ಎಂದು ವರದಿ ತಿಳಿಸಿದೆ.

15 ಲಕ್ಷ ಪ್ಯಾಲೆಸ್ಟೀನಿಯರು ಅಥವಾ ಶೇ 70ರಷ್ಟು ನಿವಾಸಿಗಳು ನಗರವನ್ನು ತೊರೆದಿದ್ದಾರೆ. ಯುದ್ಧದ ಪರಿಣಾಮ ನಗರದಲ್ಲಿ ಉಳಿದಿರುವ ನಿವಾಸಿಗಳು ಈಗ ಆಹಾರ, ಔಷಧ, ಇಂಧನ ಮತ್ತು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದಾಳಿ ಭೀತಿಯಿಂದಾಗಿ ಹಲವರು ರಸ್ತೆಗಳಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ.

ಮಾನವೀಯ ಆಧಾರದಲ್ಲಿ ನಿವಾಸಿಗಳಿಗೆ ನೆರವು ಒದಗಿಸಲು ಕದನ ವಿರಾಮ ಘೋಷಿಸಬೇಕು ಎಂಬ ಜೋರ್ಡಾನ್, ಈಜಿಪ್ಟ್‌, ವಿಶ್ವಸಂಸ್ಥೆಯ ಮನವಿಯನ್ನು ಇಸ್ರೇಲ್ ತಿರಸ್ಕರಿಸಿದೆ.  

ಗಾಜಾದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ನಗರದ ದಕ್ಷಿಣದತ್ತ ವಲಸೆಹೋಗಬೇಕು ಎಂಬ ಸೂಚನೆಯಂತೆ ಸುಮಾರು 8 ಲಕ್ಷ ಜನ ತೆರಳಿದ್ದಾರೆ. ಸುರಕ್ಷಿತ ಎಂದು ಭಾವಿಸಿದ್ದ ನಗರದ ದಕ್ಷಿಣ, ಕೇಂದ್ರ ಭಾಗದಲ್ಲೂ ಇಸ್ರೇಲ್‌ ದಾಳಿ ಆರಂಭಿಸಿದೆ. 

ಗಾಜಾದ ಉತ್ತರ–ದಕ್ಷಿಣ ಭಾಗದ ಮುಖ್ಯ ಹೆದ್ದಾರಿಯಲ್ಲಿ ಸುಮಾರು 2 ಸಾವಿರ ಜನರು ಸೇರಿದ್ದಾರೆ. ನಗರದಲ್ಲಿರುವವರು ಸುರಕ್ಷತೆಗೆ ಈ ಭಾಗದತ್ತ ತೆರಳಲು ಸೇನೆ ಭಾನುವಾರ ಸಮಯಾವಕಾಶ ನೀಡಿತ್ತು.

‘ಇಸ್ರೇಲ್‌ ಸೇನೆ ಎದುರು ಹಾದುಹೋಗುವಾಗ ಎರಡು ಕೈಗಳನ್ನು ಎತ್ತಿದ ಸ್ಥಿತಿಯಲ್ಲಿ 500 ಮೀಟರ್ ನಡೆದು ಬಂದೆ. ರಸ್ತೆಯುದ್ದಕ್ಕೂ ಶವಗಳು ಬಿದ್ದಿದ್ದವು. ಮಕ್ಕಳು ಮೊದಲ ಬಾರಿಗೆ ಯುದ್ಧ ಟ್ಯಾಂಕರ್‌ ನೋಡಿದರು. ಜಗತ್ತೇ, ನಮ್ಮೆಡೆ ಸ್ವಲ್ಪ ಅನುಕಂಪ ಇರಲಿ’ ಎಂದು ಪ್ಯಾಲೆಸ್ಟೀನಿಯರೊಬ್ಬರು ಪರಿಸ್ಥಿತಿಯನ್ನು ವಿವರಿಸಿದರು.

ನಿರ್ಣಾಯಕ ಹಂತಕ್ಕೆ ಯುದ್ಧ

ಇಸ್ರೇಲ್ ಜೆರುಸಲೇಂ (ರಾಯಿಟರ್ಸ್): ‘ಗಾಜಾವನ್ನು ದಕ್ಷಿಣ ಭಾಗದಿಂದ ಪ್ರವೇಶಿಸುತ್ತಿದ್ದೇವೆ. ಯುದ್ಧ ನಿರ್ಣಾಯಕ ಹಂತಕ್ಕೆ ಬಂದಿದೆ. ಜನತೆ ದಕ್ಷಿಣದತ್ತ ಹೋಗುವ ಹಾದಿ ಮುಕ್ತವಾಗಿದೆ‘ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಹಮಾಸ್‌ ಬಂಡುಕೋರರ ವಿರುದ್ಧ ಅವರ ಸುರಂಗಮಾರ್ಗಗಳು ಬಂಕರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸೇನೆ ಸಜ್ಜಾಗಿದೆ ಎಂದು ಸೇನೆಯು ವಕ್ತಾರ ಲೆಫ್ಟಿನಂಟ್ ಕರ್ನಲ್‌ ರಿಚರ್ಡ್ ಹೆಟ್‌ ತಿಳಿಸಿದ್ದಾರೆ. ‘ನಾವು ಅವರನ್ನು (ಹಮಾಸ್‌ ಬಂಡುಕೋರರು) ಮುಗಿಸುತ್ತೇವೆ. ‘ಮುಗಿಸುತ್ತೇವೆ’ ಎಂಬುದರ ಅರ್ಥ ಭೂಮಿಯ ಮೇಲೆ ಮತ್ತು ಭೂಮಿಯ ಒಳಗೆ (ಸುರಂಗಮಾರ್ಗ) ಎರಡೂ ಕಡೆ’ ಅವರು ಪ್ರತಿಕ್ರಿಯಿಸಿದರು.

ಯುದ್ಧ: ಎಲ್ಲಿ ಏನಾಯಿತು?

* ನಿರಾಶ್ರಿತರ ಶಿಬಿರದ ಮೇಲೆ ಭಾನುವಾರ ನಡೆದಿದ್ದ ಇಸ್ರೇಲ್‌ನ ವಾಯುದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿದೆ.

* ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್‌ ವಾಯುದಾಳಿಯಲ್ಲಿ ಭಾನುವಾರ 3 ಮಕ್ಕಳು ಸೇರಿ ನಾಲ್ವರು ಮೃತಪಟ್ಟರು.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನೆಲೆ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.

* ಗಡಿ ಯುದ್ಧ ಮತ್ತು ಭಯೋತ್ಪಾದನಾ ಚಟುವಟಿಕೆ ಹೆಚ್ಚುವ ಆತಂಕವನ್ನು ತಪ್ಪಿಸಲು ಇಸ್ರೇಲ್‌ ಮ್ತು ಪ್ಯಾಲೆಸ್ಟೀನ್‌ ನಡುವನ ಮಾತುಕತೆ ಈಗಿನ ಅಗತ್ಯ ಎಂದು ರಷ್ಯಾ ಹೇಳಿದೆ. ಗಾಜಾ ಮೆಲಿನ ದಾಳಿ ಅಂತ್ಯಗೊಳಿಸಬೇಕು ಎಂದು ರಷ್ಯಾ ಸೋಮವಾರ ಮನವಿ ಮಾಡಿದೆ.

* ಗಾಜಾ ಯುದ್ಧ ಇತರೆಡೆಗೂ ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಅಣ್ವಸ್ತ್ರ ಕ್ಷಿಪಣಿ ಉಡಾವಣಾ ವಾಹಕವನ್ನು ಈ ವಲಯದಲ್ಲಿ ನೆಲೆಗೊಳಿಸಿರುವ ಅಮೆರಿಕದ ಕ್ರಮವನ್ನು ಇಸ್ರೇಲ್‌ನ ಸೇನೆ ಸ್ವಾಗತಿಸಿದೆ. ‘ಇದು ಉತ್ತಮ ಬೆಳವಣಿಗೆ’ ಎಂದು ಸೇನಾ ವಕ್ತಾರ ಲೆಫ್ಟಿನಂಟ್ ಕರ್ನಲ್‌ ರಿಚರ್ಡ್ ಹೆಟ್ ಪ್ರತಿಕ್ರಿಯಿಸಿದರು.

* ಗಾಜಾಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಲು ಗಂಭೀರ ಯತ್ನ ನಡೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡನ್‌ ಜೊತೆಗೂ ಅವರು ಗಾಜಾಗೆ ನೆರವು ನೀಡುವ ಕುರಿತು ಚರ್ಚಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.