ADVERTISEMENT

ಎದುರಾದ ಜೆಫ್ರಿ ಲೈಂಗಿಕ ಹಗರಣ; ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಟ್ರಂಪ್‌ ಪ್ರಯಾಣ

ರಾಯಿಟರ್ಸ್
Published 25 ಜುಲೈ 2025, 5:48 IST
Last Updated 25 ಜುಲೈ 2025, 5:48 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

–ರಾಯಿಟರ್ಸ್ ಚಿತ್ರ

ಲಂಡನ್‌: ಹಣಕಾಸು ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿರುವ ತಮ್ಮ ಬಹುಕಾಲದ ಗೆಳೆಯ ಜೆಫ್ರಿ ಎಪ್‌ಸ್ಟೀನ್‌ ಜತೆಗಿನ ತಮ್ಮ ಸಂಬಂಧದ ಕುರಿತು ವಿವಾದ ಎದ್ದಿರುವ ಹೊತ್ತಿನಲ್ಲೇ, ಜನರ ಪ್ರಶ್ನೆಗಳಿಂದ ಪಾರಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಹೊರಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಸ್ಕಾಟ್‌ಲೆಂಡ್‌ನ ಪೂರ್ವ ತೀರದಲ್ಲಿರುವ ತಮ್ಮದೇ ಒಡೆತನದ ಟರ್ನ್‌ಬೆರಿ ಗಾಲ್ಫ್‌ ರೆಸಾರ್ಟ್‌ಗೆ ಟ್ರಂಪ್ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಂದರ್ಭದಲ್ಲೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್‌ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದೆನ್ನಲಾಗಿದೆ.

ಈ ಭೇಟಿಯಲ್ಲಿ ಟ್ರಂಪ್ ಅವರು 18 ಹೋಲ್‌ನ ಗಾಲ್ಫ್‌ಕೋರ್ಸ್‌ನಲ್ಲಿ ಆಡಲಿದ್ದಾರೆ. ಸ್ಕಾಟಿಷ್‌ ದ್ವೀಪದ ಮೂಲದವರಾದ ತಮ್ಮ ತಾಯಿಯ ನೆನಪಿನಲ್ಲಿ ಈ ರೆಸಾರ್ಟ್‌ ಅನ್ನು ಟ್ರಂಪ್ ಆರಂಭಿಸಿದ್ದಾರೆ. 

ಎರಡನೇ ಅವಧಿಯಲ್ಲಿ ತೀವ್ರ ರಾಜಕೀಯ ಸಂಘರ್ಷಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲೇ ಟ್ರಂಪ್ ಸ್ಕಾಟ್‌ಲೆಂಡ್‌ನ ಗಾಲ್ಫ್ ರೆಸಾರ್ಟ್‌ ಭೇಟಿ ನಿಗದಿಯಾಗಿದೆ. ಆದರೆ ಮಿತ್ರಪಕ್ಷಗಳನ್ನೂ ಒಳಗೊಂಡು ವಿರೋಧಪಕ್ಷಗಳು ಜೆಫ್ರಿ ಪ್ರಕರಣ ಕುರಿತು ಸಾಲುಸಾಲು ಪ್ರಶ್ನೆಗಳನ್ನು ಟ್ರಂಪ್‌ ಮುಂದಿಟ್ಟಿವೆ. ತನಿಖೆಯನ್ನು ನಿರ್ವಹಿಸುತ್ತಿರುವ ರೀತಿ, ಜೆಫ್ರಿ ಮೇಲಿರುವ ಅಪರಾಧ ಪ್ರಕರಣಗಳ ಕಡತಗಳ ಕುರಿತು ತನಿಖೆ ಮತ್ತು 2019ರಲ್ಲಿ ಜೈಲಿನಲ್ಲಿರುವಾಗ ಎಪ್‌ಸ್ಟೀನ್‌ ಮೃತಪಟ್ಟಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

‘ಮೇಕ್ ಅಮೆರಿಕಾ ಗ್ರೇಟ್‌ ಅಗೈನ್‌’ ಎಂಬ ಟ್ರಂಪ್ ಅಭಿಯಾನದ ನಿಷ್ಠಾವಂತ ಕಾರ್ಯಕರ್ತರು, ಬೆಂಬಲಿಗರು ಮತ್ತು ಬಹುತೇಕ ಅಮೆರಿಕನ್ನರು ಹಾಗೂ ರಿಪಬ್ಲಿಕನ್ ಪಕ್ಷದವರು ಸರ್ಕಾರವನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಜೆಫ್ರಿ ಪ್ರಕರಣ ಎಬ್ಬಿಸಿರುವ ಬಿರುಗಾಳಿಯಿಂದ ಶ್ವೇತಭವನದ ಅಧಿಕಾರಿಗಳು ಹೈರಾಣಾಗಿದ್ದಾರೆ. ಟ್ರಂಪ್ ಅವರ ವಿದೇಶ ಪ್ರವಾಸದಿಂದ ಒಂದಷ್ಟು ದಿನ ನೆಮ್ಮದಿ ಸಿಗಬಹುದು ಎಂದು ಭಾವಿಸಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.