ADVERTISEMENT

ಮಮ್ದಾನಿ – ಟ್ರಂಪ್ ಭೇಟಿ: ಮತ್ತದೇ ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ ಮಾತು

ಪಿಟಿಐ
Published 22 ನವೆಂಬರ್ 2025, 5:55 IST
Last Updated 22 ನವೆಂಬರ್ 2025, 5:55 IST
<div class="paragraphs"><p>ಜೊಹ್ರಾನ್ ಮಮ್ದಾನಿ ಹಾಗೂ ಡೊನಾಲ್ಟ್ ಟ್ರಂಪ್‌</p></div>

ಜೊಹ್ರಾನ್ ಮಮ್ದಾನಿ ಹಾಗೂ ಡೊನಾಲ್ಟ್ ಟ್ರಂಪ್‌

   

ಎಕ್ಸ್ ಚಿತ್ರ

ನ್ಯೂಯಾರ್ಕ್‌: ನ್ಯೂಯಾರ್ಕ್‌ ನಗರದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಶ್ವೇತ ಭವನಕ್ಕೆ ಶುಕ್ರವಾರ ಭೇಟಿ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ADVERTISEMENT

ಟ್ರಂಪ್ ಅವರನ್ನು ಭೇಟಿ ಮಾಡಲು ಮಮ್ದಾನಿ ಅವರು ವಾಷಿಂಗ್ಟನ್‌ನಲ್ಲಿರುವ ಶ್ವೇತಭವನಕ್ಕೆ ಶುಕ್ರವಾರ ಬಂದಿಳಿದರು. ಅಧ್ಯಕ್ಷರ ಮೇಜಿನ ಪಕ್ಕ ಮಮ್ದಾನಿ ನಿಂತಿದ್ದರೆ, ಟ್ರಂಪ್ ಕುಳಿತಿದ್ದರು. 

‘ಈ ಭೇಟಿಯನ್ನು ನಾನು ಸಂಭ್ರಮಿಸಿದ್ದೇನೆ. ಅದ್ಭುತ’ ಎಂದು ಟ್ರಂಪ್‌ ಹೇಳಿದ್ದಾರೆ.

‘ಎಂಟು ಯುದ್ಧಗಳಲ್ಲಿ ಪಾಲ್ಗೊಂಡ ರಾಷ್ಟ್ರಗಳ ಜೊತೆ ಯಶಸ್ವಿ ಶಾಂತಿಯ ಮಾತುಕತೆ ನಡೆಸಿದ್ದೇನೆ. ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನೂ ನಿಲ್ಲಿಸಿದ್ದೇನೆ’ ಎಂದು ಟ್ರಂಪ್ ಹೇಳಿದ್ದಾರೆ.

ಆಪರೇಷನ್ ಸಿಂಧೂರ್‌ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಆರಂಭವಾದ ಯುದ್ಧವನ್ನು ನಿಲ್ಲಿಸದಿದ್ದರೆ ಎರಡೂ ರಾಷ್ಟ್ರಗಳ ಮೇಲೆ ಶೇ 350ರಷ್ಟು ಸುಂಕ ಹೇರುವುದಾಗಿ ಬೆದರಿಕೆಯೊಡ್ಡಿದ್ದೆ ಎಂದು ಟ್ರಂಪ್ ಅವರು ಬುಧವಾರ ಹೇಳಿದ್ದರು. ಅದನ್ನೇ ಶುಕ್ರವಾರವೂ ಪುನರುಚ್ಚರಿಸಿದ್ದಾರೆ. 

‘ಅಣ್ವಸ್ತ್ರಗಳನ್ನು ಹೊಂದಿರುವ ನೆರೆಹೊರೆಯ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಪರಿಹರಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಕರೆ ಮಾಡಿ, ‘ನಾವು ಯುದ್ಧಕ್ಕೆ ಮುಂದಾಗುವುದಿಲ್ಲ’ ಎಂದರು’ ಎಂದು ಟ್ರಂಪ್ ಹೇಳಿದ್ದಾರೆ.

ಯುದ್ಧ ನಿಲ್ಲಿಸಿದೆ ಎಂದು 60 ಬಾರಿ ಟ್ರಂಪ್‌ ಹೇಳಿಕೆ

ಮೇ 10ರಂದು ಟ್ವೀಟ್‌ ಮಾಡಿದ ಟ್ರಂಪ್‌, ‘ರಾತ್ರಿ ಇಡೀ ನಡೆದ ಮಾತುಕತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವಾಷಿಂಗ್ಟನ್‌ ಮಧ್ಯಸ್ಥಿಕೆ ವಹಿಸಿತು. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಸಂಪೂರ್ಣ ಕದನ ವಿರಾಮ ಜಾರಿಗೆ ಬಂದಿದೆ’ ಎಂದು ಟ್ರಂಪ್ ಘೋಷಿಸಿದರು. ಅಲ್ಲಿಂದ ಇಲ್ಲಿಯವರೆಗೆ ಈ ಮಾತನ್ನು ವಿವಿಧ ವೇದಿಕೆಗಳಲ್ಲಿ 60 ಬಾರಿ ಟ್ರಂಪ್‌ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಇಲ್ಲ ಎಂಬುದನ್ನು ಭಾರತ ಹೇಳುತ್ತಲೇ ಬರುತ್ತಿದೆ. 

ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ 26 ನಾಗರಿಕರು ಮೃತಪಟ್ಟರು. ಇದಕ್ಕೆ ಪ್ರತೀಕಾರವಾಗಿ ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆ ನಡೆಸಿತು. ಇದಾದ ನಂತರ ಉಭಯ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ಮುಂದುವರಿಯಿತು. ನಾಲ್ಕು ದಿನಗಳ ತೀವ್ರ ಯುದ್ಧದ ನಂತರ ಮೇ 10ರಂದು ಕದನ ವಿರಾಮ ಘೋಷಣೆಯಾಯಿತು.

ಪೌರತ್ವ ಪಡೆದ 6 ವರ್ಷಗಳಲ್ಲಿ ನ್ಯೂಯಾರ್ಕ್ ಮೇಯರ್ ಆದ ಮಮ್ದಾನಿ

ನ್ಯೂಯಾರ್ಕ್‌ ನಗರದ ಮೇಯರ್ ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯ ನಡುವೆ ಭಾರತೀಯ ಮೂಲದ ಮಮ್ದಾನಿ ಗೆಲುವು ಸಾಧಿಸಿದರು. ರಿಪ‍ಬ್ಲಿಕನ್‌ ಪಕ್ಷದ ಕರ್ಟಿಸ್ ಸಿಲ್ವಾ ಮತ್ತು ರಾಜಕೀಯದಲ್ಲಿ ಭಾರಿ ಹೆಸರು ಮಾಡಿರುವ ನ್ಯೂಯಾರ್ಕ್‌ ರಾಜ್ಯದ ಗವರ್ನರ್‌ ಆ್ಯಂಡ್ರೂ ಕುಮೊ ಅವರನ್ನು ಪರಾಭವಗೊಳಿಸಿ ನ್ಯೂಯಾರ್ಕ್‌ನ ಮೇಯರ್ ಮತ್ತು ಮೊದಲ ಮುಸ್ಲಿಂ  ಮೇಯರ್ ಎಂಬುದೂ ದಾಖಲಾಯಿತು.

ಮುಮ್ದಾನಿ ಅವರು ಭಾರತ ಮೂಲದ ಸಿನಿಮಾ ನಿರ್ದೇಶಕಿ ಮೀರಾ ನಾಯರ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮೂದ್ ಮಮ್ದಾನಿ ಅವರ ಪುತ್ರ. ಉಗಾಂಡದ ಕಂಪಾಲದಲ್ಲಿ ಜನಿಸಿದ ಜೊಹ್ರಾನ್‌, ತಮ್ಮ 7ನೇ ವಯಸ್ಸಿಗೆ ಕುಟುಂಬದೊಂದಿಗೆ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡರು. 2018ರಲ್ಲಿ ಅವರಿಗೆ ಅಮೆರಿಕದ ಪೌರತ್ವ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.