ಗಾಜಾದಿಂದ ಜನರ ಪಲಾಯನ
ಟೆಲ್ ಅವಿವ್: ಗಾಜಾ ಪಟ್ಟಿಯ ಹಲವೆಡೆ ಮಂಗಳವಾರ ನಸುಕಿನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಈ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಜನವರಿಯಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರದಲ್ಲಿ ಇಸ್ರೇಲ್ ನಡೆಸಿದ ಭಾರಿ ಪ್ರಮಾಣದ ದಾಳಿ ಇದಾಗಿದೆ.
ಕದನ ವಿರಾಮ ವಿಸ್ತರಿಸಲು ಅಗತ್ಯವಿರುವ ಪ್ರಗತಿಯು ಮಾತುಕತೆಗಳಲ್ಲಿ ಕಂಡುಬಾರದ ಕಾರಣ, ದಾಳಿಗೆ ತಾವು ಆದೇಶ ನೀಡಿದ್ದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕಾರ್ಯಾಚರಣೆಯು ಇನ್ನಷ್ಟು ವಿಸ್ತರಣೆ ಕಾಣುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ವಿಚಾರವಾಗಿ ತನ್ನ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿರುವ ಅಮೆರಿಕ, ಇಸ್ರೇಲ್‌ನ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಇಸ್ರೇಲ್ ನಡೆಸಿರುವ ದಾಳಿಯು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಹೇಳಿರುವ ಹಮಾಸ್, ಈ ದಾಳಿಯಿಂದಾಗಿ ಒತ್ತೆಯಾಳುಗಳ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಎಚ್ಚರಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ಆರಂಭವಾದಾಗ ಈ ಪ್ರದೇಶದಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ಸ್ಥಿತಿಯು ಮುಸ್ಲಿಮರಿಗೆ ಪವಿತ್ರವಾಗಿರುವ ರಂಜಾನ್ ತಿಂಗಳಲ್ಲಿ ಇರಲಿಲ್ಲ. ಕದನ ವಿರಾಮದ ನಂತರ ಪರಿಸ್ಥಿತಿ ತುಸು ತಿಳಿಯಾಗಿತ್ತು. ಆದರೆ ಈ ಹಠಾತ್ ದಾಳಿಯು ಪರಿಸ್ಥಿತಿಯನ್ನು ಮತ್ತೆ ಪ್ರಕ್ಷುಬ್ಧಗೊಳಿಸಿದೆ.
ಗಾಜಾದಲ್ಲಿ ಹಮಾಸ್ ಬಂಡುಕೋರರ ನಿಯಂತ್ರಣದಲ್ಲಿದ್ದ ಬಂದೀಖಾನೆಯೊಂದು ಇಸ್ರೇಲ್ ದಾಳಿಗೆ ಸಿಲುಕಿ ನೆಲಸಮಗೊಂಡಿದೆ. ಅಲ್ಲಿದ್ದ ಕೈದಿಗಳು ಹಾಗೂ ಪೊಲೀಸರ ಪೈಕಿ ಹಲವರು ಮೃತಪಟ್ಟಿದ್ದಾರೆ. ದಾಳಿಯ ನಂತರ ಗಾಜಾ ಪಟ್ಟಿಯಲ್ಲಿನ ಹಲವು ಶಾಲೆಗಳು ತರಗತಿಗಳನ್ನು ಸ್ಥಗಿತಗೊಳಿಸಿವೆ. ಶಾಲೆಗಳನ್ನು ಈಚೆಗಷ್ಟೇ ಮತ್ತೆ ತೆರೆಯಲಾಗಿತ್ತು.
ವಿಶ್ವಸಂಸ್ಥೆ ಆಘಾತ...
ಗಾಜಾದ ಮೇಲೆ ಇಸ್ರೇಲ್ ನಡೆಸಿರುವ ದಾಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಆಘಾತ ವ್ಯಕ್ತಪಡಿಸಿದ್ದು, ಕದನ ವಿರಾಮವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ.
ಗಾಜಾದಲ್ಲಿರುವ ಜನರಿಗೆ ಮಾನವೀಯ ನೆಲೆಯಲ್ಲಿ ನೆರವು ಮುಂದುವರಿಸಬೇಕು. ಹಮಾಸ್ ಹಿಡಿದಿಟ್ಟಿರುವ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿ ಬಗ್ಗೆ ತಿಳಿದು ಆಘಾತವಾಗಿದೆ. ಗಾಜಾದಲ್ಲಿ ಕದನ ವಿರಾಮ ಒಪ್ಪಂದವನ್ನು ಗೌರವಿಸಬೇಕು.ಆ್ಯಂಟೊನಿಯೊ ಗುಟೆರಸ್ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ
ಕದನ ವಿರಾಮವನ್ನು ಕಾಪಾಡಿಕೊಳ್ಳಬೇಕು... ಅಲ್ಲಿನ ಜನ ಈಗಾಗಲೇ ಬಹಳ ಸಂಕಷ್ಟ ಅನುಭವಿಸಿದ್ದಾರೆ.ಆ್ಯಂಟನಿ ಆಲ್ಬನೀಸ್ ಆಸ್ಟ್ರೇಲಿಯಾ ಪ್ರಧಾನಿ
ಪೂರ್ವ ಭಾಗ ತೊರೆಯಲು ಆದೇಶ
ಗಾಜಾ ಪಟ್ಟಿ: ಗಾಜಾದ ಜನ ಪೂರ್ವ ಭಾಗವನ್ನು ತೊರೆಯಬೇಕು ಗಾಜಾ ಪಟ್ಟಿಯ ಮಧ್ಯ ಭಾಗಕ್ಕೆ ತೆರಳಬೇಕು ಎಂದು ಇಸ್ರೇಲ್ ಸೇನೆ ಆದೇಶಿಸಿದೆ. ವೈಮಾನಿಕ ದಾಳಿಯ ನಂತರ ಈ ಆದೇಶ ನೀಡಲಾಗಿದೆ. ಇಸ್ರೇನ್ ಸೇನೆಯು ಮತ್ತೆ ಭೂದಾಳಿ ನಡೆಸುವ ಸಾಧ್ಯತೆ ಇದೆ ಎಂಬುದನ್ನು ಈ ಆದೇಶವು ಸೂಚಿಸುತ್ತಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.