ADVERTISEMENT

Pakistan Train Attack | 190 ಪ್ರಯಾಣಿಕರ ರಕ್ಷಣೆ, 30 ಉಗ್ರರ ಹತ್ಯೆ

ಏಜೆನ್ಸೀಸ್
Published 12 ಮಾರ್ಚ್ 2025, 1:55 IST
Last Updated 12 ಮಾರ್ಚ್ 2025, 1:55 IST
<div class="paragraphs"><p>ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ</p></div>

ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ

   

(ರಾಯಿಟರ್ಸ್ ಚಿತ್ರ)

ಸಿಬಿ: ಪಾಕಿಸ್ತಾನದ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಉಗ್ರರು ಒತ್ತೆ ಇರಿಸಿಕೊಂಡಿರುವ ಪ್ರಯಾಣಿಕರಲ್ಲಿ 190 ಮಂದಿಯನ್ನು ಭದ್ರತಾ ಪಡೆಗಳು ರಕ್ಷಿಸಿ, 30 ಉಗ್ರರನ್ನು ಹತ್ಯೆ ಮಾಡಿವೆ.

ADVERTISEMENT

ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ಸಂಚರಿಸುತ್ತಿದ್ದ ಒಂಬತ್ತು ಬೋಗಿಗಳಿರುವ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 450 ಪ್ರಯಾಣಿಕರು ಇದ್ದರು. ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪ ಸುರಂಗ ಮಾರ್ಗದಲ್ಲಿ ಬಂದೂಕುಧಾರಿಗಳು ರೈಲಿನ ಮೇಲೆ ದಾಳಿ ನಡೆಸಿ, ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿದ್ದಾರೆ.

ಪ್ರಯಾಣಿಕರ ರಕ್ಷಣೆಗೆ ಪಾಕಿಸ್ತಾನದ ಸೇನೆ ಬುಧವಾರ ಪೂರ್ಣ ಪ್ರಮಾಣದ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯ ನಡುವೆಯೂ ಕಳೆದ 24 ತಾಸುಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿ 190 ಪ್ರಯಾಣಿಕರನ್ನು ರಕ್ಷಿಸಲಾಗಿದೆ. 

ಅಲ್ಲದೆ, 30 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ 37 ಪ್ರಯಾಣಿಕರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಸುರಂಗವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.

ಸುರಂಗದ ಬಳಿ ಭಾರಿ ಗುಂಡಿನ ಚಕಮಕಿ ನಡೆದಿದೆ. ಆತ್ಮಾಹುತಿ ಬಾಂಬ್ ಜಾಕೆಟ್ ಧರಿಸಿರುವ ಉಗ್ರರು ರೈಲಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ರೈಲಿನಲ್ಲಿ ಇನ್ನು ಎಷ್ಟು ಮಂದಿ ಒತ್ತೆಯಾಳುಗಳು ಮತ್ತು ಉಗ್ರರು ಇದ್ದಾರೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅರೆಸೇನಾ ಪಡೆಗಳು ಖಾಲಿ ಶವಪೆಟ್ಟಿಗೆಗಳನನ್ನು ಕ್ವೆಟ್ಟಾದ ರೈಲು ನಿಲ್ದಾಣಕ್ಕೆ ತಂದಿದ್ದು, ಅವುಗಳನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ.  

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಗುಂಪು ತಕ್ಷಣಕ್ಕೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಗುಂಪು, ಭದ್ರತಾ ಪಡೆಗಳ ಬಂಧನದಲ್ಲಿರುವ ತಮ್ಮ ಸದಸ್ಯರ ಬಿಡುಗಡೆಗೆ ಬೇಡಿಕೆ ಇಟ್ಟಿದೆ. ಒಂದು ವೇಳೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದರೆ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿವೆ.

ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಿಡುಗಡೆಗೊಂಡ ಪ್ರಯಾಣಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.